

ಬೆಂಗಳೂರು: ಚೆಲ್ಲಕೆರೆಯಲ್ಲಿರುವ ಖಾಸಗಿ ಫ್ರೀ ಸ್ಕೂಲ್‌ನ (ನರ್ಸರಿ) ಮೂರನೇ ಮಹಡಿಯಿಂದ ಬಿದ್ದು ೪ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ.
ಕೇರಳ ಮೂಲದ ಹಾಗೂ ಹೆಣ್ಣೂರಿನ ವಾಸವಿದ್ದ ಜಿನಾ ಅನ್ನಾ ಜಿಟೋ (೪) ಗಾಯಗೊಂಡ ಮಗು.
ಖಾಸಗಿ ಕಂಪನಿಯಲ್ಲಿ ಟೆಕ್ಕಿಗಳಾಗಿರುವ ಜಿನಾ ತಂದೆ ಜಿಟೋ ಟಾಮಿ ಜೋಸೆಫ್ ಮತ್ತು ತಾಯಿ ಬಿನಿಟೋ ಥಾಮಸ್ ಉದ್ಯೋಗ ನಿಮಿತ್ತ ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ತಮ್ಮ ಮಗಳಾದ ಜಿನಾಳನ್ನು ಚೆಲ್ಲಕೆರೆಯ ಖಾಸಗಿ ಫ್ರೀ ಸ್ಕೂಲ್‌ಗೆ ಸೇರಿಸಿದ್ದರು. ಜ.೨೨ರಂದು ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ (ನರ್ಸರಿ) ಮೂರನೇ ಮಹಡಿಯಿಂದ ಬಿದ್ದು ಜಿನಾ ತಲೆಗೆ ತೀವ್ರ ಗಾಯವಾಗಿತ್ತು. ಇದೀಗ ಗಂಭೀರವಾಗಿ ಗಾಯಗೊಂಡಿರುವ ಜಿನಾಗೆ ಐಸಿಯುನಲ್ಲಿ ಚಿಕಿತ್ಸೆೆ ನೀಡಲಾಗುತ್ತಿದೆ. ಮಗು ಬಿದ್ದಿರುವ ಬಗ್ಗೆೆ ಸೂಕ್ತ ಮಾಹಿತಿ ನೀಡದ ಶಾಲೆ ವಿರುದ್ಧ ಮಗುವಿನ ಪಾಲಕರು ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.