

ಚಿಕ್ಕಮಗಳೂರು: ಪ್ರವಾಹದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಮೃತಪಟ್ಟಿದ್ದಾನೆಂದು ಆತನ ಕುಟುಂಬಕ್ಕೆ ಪರಿಹಾರ ಕೊಡಲೆಂದು ಚೆಕ್ ಕೂಡ ರೆಡಿಯಾಗಿತ್ತು... ಅಷ್ಟರಲ್ಲಿ ಆಗಿದ್ದೇ ಬೇರೆ. ಸತ್ತಿದ್ದಾನೆ ಅಂದುಕೊಂಡಿದ್ದ ವ್ಯಕ್ತಿ 13 ದಿನಗಳ ಬಳಿಕ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ!
ಹೌದು ಇಂತಹ ಘಟನೆ ಚಿಕ್ಕಮಗಳೂರಲ್ಲಿ ಸಂಭವಿಸಿದೆ. ಜು.12ರಂದು ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಚಿಂದಿ ಆಯುತ್ತಾ ಹಳ್ಳ ದಾಟುವ ವೇಳೆ ಪತ್ನಿ ಗೀತಾಳ ಕಣ್ಣೆದುರೇ ಗಂಡ ಸೂರಿ ನೀರಲ್ಲಿ ಕೊಂಚಿಕೊಂಡು ಹೋಗಿದ್ದ. ಆತನಿಗಾಗಿ ರಕ್ಷಣಾ ತಂಡ ಎಷ್ಟೇ ಹುಡುಕಾಟ ನಡೆಸಿದರೂ ಸುಳಿವೇ ಸಿಕ್ಕಿರಲಿಲ್ಲ. 'ನನ್ನ ಸೂರಿ ಸಿಕ್ಕುದ್ನಾ ಸಾರ್, ಬೇಗ ಹುಡುಕಿಕೊಡಿ ಅಣ್ಣ… ಸೂರಿಯನ್ನು ಬಿಟ್ಟು ನಾನೊಬ್ಬಳೇ ಎಲ್ಲಿ ಹೋಗಲಿ…' ಎಂದು ಗೀತಾ ಬಿಕ್ಕಿಬಿಕ್ಕಿ ಅಳುತ್ತಾ ಸೆರಗೊಡ್ಡಿ ಅಂಗಲಾಚುತ್ತಿದ್ದ ದೃಶ್ಯ ನೆರೆದಿದ್ದರವ ಕರುಳು ಕಿವುಚಿದ್ದಂತೂ ಸುಳ್ಳಲ್ಲ.
ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ನಗರಸಭೆ, ಪೊಲೀಸರು, ಸ್ಥಳೀಯರು ಸೂರಿಗಾಗಿ ಶೋಧ ಕಾರ್ಯ ನಡೆಸಿದ್ದರು. ಆತನ ಸುಳಿವೇ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
ಪತ್ನಿಯ ಗೋಳಾಟ ನೋಡಲಾಗುತ್ತಿರಲಿಲ್ಲ: ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಸೂರಿ ಮತ್ತು ಗೀತಾ ಇಬ್ಬರೂ ಚಿಂದಿ ಆಯುವ ಕೆಲಸವನ್ನ ಆಯ್ದುಕೊಂಡದ್ದು ಪ್ರೇಮವಿವಾಹದಿಂದ. ಹೊನ್ನಾಳಿಯ ಸೂರಿ ಮತ್ತು ಚಿಕ್ಕಮಗಳೂರು ತಾಲೂಕು ಹೊಸಪೇಟೆಯ ಗೀತಾ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪ್ರೀತಿಸಿ 6 ವರ್ಷದ ಹಿಂದೆ ಮಾದುವೆಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕುಟುಂಬದವರೂ ಇವರಿಬ್ಬರನ್ನು ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಕಾಫಿತೋಟದ ಕೆಲಸ ಬಿಟ್ಟು ಇಬ್ಬರೂ ಚಿಕ್ಕಮಗಳೂರು ನಗರದಲ್ಲಿ ಗುಜರಿ ವಸ್ತು ಆಯುವ ಕೆಲಸ ಆರಂಭಿಸಿದ್ದರು. ಗುಜರಿ ವಸ್ತುಗಳನ್ನು ಮಾರಿ ಅದರಿಂದ ಬಂದ ಹಣದಲ್ಲೇ ಹಸಿವು ನೀಗಿಸಿಕೊಳ್ಳುತ್ತಿದ್ದ ಈ ದಂಪತಿಗೆ ಬಸ್ ನಿಲ್ದಾಣವೇ ಸೂರಾಗಿತ್ತು. ನಿತ್ಯ ರಾತ್ರಿ ಬಸ್ ನಿಲ್ದಾಣದಲ್ಲೇ ಮಲಗುತ್ತಿದ್ದರು. ಚಿಂದಿ ಆಯುವ ಸಮಯದಲ್ಲೇ ಸೂರಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ.
‘ಎಂದಿನಂತೆ ಮಂಗಳವಾರ(ಜು.12) ಚಿಂದಿ ಆಯುತ್ತಿರುವಾಗ ಹಳ್ಳದ ಬದುನಲ್ಲಿ ನಿಂತಿದ್ದಾಗ ಸೂರಿ ನೀರಿನಲ್ಲಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ಕೊಡುತ್ತಿದ್ದ. ಅದನ್ನೆಲ್ಲ ನಾನು ಚೀಲದಲ್ಲಿ ತುಂಬಿಸುತ್ತಿದ್ದೆ. ಇನ್ನೇನು ಚೀಲ ಪೂರ್ಣವಾಗುವಷ್ಟರಲ್ಲಿ ಸೂರಿ ಮುಳುಗಿಬಿಟ್ಟ. ಚಿಂದಿ ಆಯುತ್ತಲೇ ನನ್ನ ಸೂರಿ ನೀರಲ್ಲಿ ಮುಳುಗಿದ. ಕೂಗಿಕೊಂಡು ಓಡಿ ಬಂದೆ. ಗುಜರಿ ಬ್ಯಾಗ್ ಈಗಲೂ ಅಲ್ಲೇ ಇದೆ... ನನ್ನ ಸೂರಿ ಸಿಕ್ಕುದ್ನಾ ಸಾರ್… ಬೇಗ ಹುಡುಕಿಕೊಡಿ ಅಣ್ಣ…’ ಎಂದು ಗೀತಾ ಅಂದು(ರಕ್ಷಣಾ ಕಾರ್ಯಾಚರಣೆ ನಡೆಯುವ ವೇಳೆ) ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಆತ ಮೃತಪಟ್ಟಿದ್ದಾನೆಂದು ಪತ್ನಿ ಗೀತಾಗೆ ಪರಿಹಾರದ ಚೆಕ್ ಕೊಡಲು ಸಿದ್ಧತೆಯೂ ನಡೆದಿತ್ತು. ಅಷ್ಟರಲ್ಲಿ ಇಂದು(ಜು.26) ಬೆಳಗ್ಗೆ ಅಂದ್ರೆ ಸೂರಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಅಂದುಕೊಂಡಿದ್ದ ವ್ಯಕ್ತಿ ನಗರದ ಐ.ಜಿ.ರಸ್ತೆಯಲ್ಲಿ ಓಡಾಡಿಕೊಂಡಿದ್ದ. ಈ ಸುದ್ದಿ ಕೇಳಿ ಸ್ಥಳೀಯರು ಮತ್ತು ಅಧಿಕಾರಿಗಳು ಶಾಕ್ ಆಗಿದ್ದಾರೆ. ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ಸೂರಿ, ಸ್ವಲ್ಪ ದೂರದ ಬಳಿಕ ಹೊರ ಬಂದಿರುವುದು ಗೊತ್ತಾಗಿದೆ. ಆದರೂ ಯಾರಿಗೂ ಹೇಳದೆ, ತಲೆಮರೆಸಿಕೊಂಡಿದ್ದ ಎಂದು ಗೊತ್ತಾಗಿದೆ. ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸೂರಿಗೆ ಬುದ್ಧಿ ಹೇಳಿದ್ದಾರೆ. ಸತ್ತಿದ್ದಾನೆಂದು ತಿಳಿದಿದ್ದ ವ್ಯಕ್ತಿ ಬದುಕಿರುವ ಸುದ್ದಿ ಕೇಳಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.