

ಮೈಸೂರು: ತಾಲೂಕಿನ ಜಯಪುರ ಹೋಬಳಿಯ ದಾರಿಪುರದಲ್ಲಿ ಕೋಳಿ ಫಾರ್ಮ್‌ಗೆ ನುಗ್ಗಿ ಕೋಳಿ ತಿನ್ನುತ್ತಿದ್ದ ಚಿರತೆ ಬೋನಿಗೆ ಬಿದ್ದಿದೆ.
ದಾರಿಪುರದಲ್ಲಿದ್ದ ಕೋಳಿ ಫಾರ್ಮ್‌ವೊಂದಕ್ಕೆ ಬುಧವಾರ ಚಿರತೆಯೊಂದು ದಾಳಿ ನಡೆಸಿ ಹಲವು ಕೋಳಿಗಳನ್ನು ಕೊಂದಿತ್ತು. ಈ ಸಂಬಂಧ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಇಲ್ಲಿ ಬೋನು ಇಡಲಾಗಿತ್ತು. ಶುಕ್ರವಾರ ಕೋಳಿ ಬೇಟೆಯಾಡಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಬೋನಿನೊಂದಿಗೆ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಆರೋಗ್ಯ ಪರಿಶೀಲಿಸಿದರು. ಬಳಿಕ ಅದಕ್ಕೆ ಮೈಕ್ರೋಚಿಪ್ ಅಳವಡಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಬೋಗಾದಿಯಲ್ಲಿರುವ ಟ್ರೆಂಡ್ಸ್ ಅಪಾರ್ಟ್‌ಮೆಂಟ್ ಆವರಣದಲ್ಲಿ ಶುಕ್ರವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಅಪಾರ್ಟ್‌ಮೆಂಟ್ ಆವರಣದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು,
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ತಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು.
ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಲ್ಲಿ ಚಿರತೆ ಅಡಗಿ ಕುಳಿತಿರುವ ಶಂಕೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಯಾವುದೇ ಸುಳಿವು ದೊರೆತಿಲ್ಲ. ಈ ಭಾಗದಲ್ಲಿ ಜಾನುವಾರುಗಳು ಹಾಗೂ ಶ್ವಾನಗಳನ್ನು ಕೊಂದಿರುವ ಯಾವುದೇ ಪ್ರಕರಣವೂ ವರದಿಯಾಗಿಲ್ಲ.
ಇದರಿಂದ ಸ್ಥಳೀಯ ಮನೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ, ಸೂಕ್ತ ಸ್ಥಳದಲ್ಲಿ ಬೋನಿಡಲು ಅರಣ್ಯ ಇಲಾಖೆ ಮುಂದಾಗಿದೆ.