

ಮೈಸೂರು: ಕೇಂದ್ರದ ಬಿಜೆಪಿ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಲ್ಲಿ ಬಂಧಿಯಾಗಿಸಿದೆ. ಅದರಲ್ಲೂ ಇಂಡಸ್ಟ್ರಿಯಲ್ ರಿಲೇಷನ್ ಕೋಟ್ ಬಿಲ್ ಜಾರಿಗೆ ಬಂದರೆ ಅಪಾಯಕಾರಿ ಎಂದು ಎಐಟಿಯುಸಿ ಉಪ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಮಕೃಷ್ಣ ಹೇಳಿದರು.
ಜೆಎಲ್‌ಬಿ ರಸ್ತೆಯ ಇಂಜಿನಿಯರ್ಸ್ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ)ನ 103ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಅಪಾಯಕಾರಿ ಕಾನೂನುಗಳ ಜಾರಿಗೂ ಮೊದಲೇ ದೇಶದಲ್ಲಿ ದುಡಿಯುವ ವರ್ಗದ ಮೇಲಿನ ಶೋಷಣೆ ಆರಂಭವಾಗಿದೆ. ಹೀಗಾಗಿ ದುಡಿಯುವ ವರ್ಗಗಳ ಹಿತರಕ್ಷಣೆಗಾಗಿ ದೇಶದಲ್ಲಿ ರಾಜಕೀಯ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆಯಿಂದ ದೇಶದಲ್ಲಿ ಶೋಷಣೆಗೆ ಒಳಗಾಗಿದ್ದ ದುಡಿಯುವ ವರ್ಗವನ್ನು ರಕ್ಷಿಸುವ ಸಲುವಾಗಿ 1920ರಲ್ಲಿ ಬಾಂಬೆಯಲ್ಲಿ ದುಡಿಯುವ ವರ್ಗ ಹೋರಾಟಕ್ಕೆ ಧುಮುಕುವ ಮೂಲಕ ಎಐಟಿಯುಸಿ ಸ್ಥಾಪನೆಯಾಯಿತು. ಲಾಲಾ ಲಜಪತರಾಯ್ ಸಂಸ್ಥಾಪಕ ಅಧ್ಯಕ್ಷರಾಗಿ ದೇಶದ ಉದ್ದಗಲಕ್ಕೆ ಸಂಚರಿಸಿ ಸಂಘಟನೆಯನ್ನು ವಿಸ್ತರಣೆ ಮಾಡಿದರು. ದುಡಿಯುವ ವರ್ಗದ 43 ಸಂಘಟನೆಗಳೂ ಸೇರಿ 16,400 ಸದಸ್ಯರೊಂದಿಗೆ ಆರಂಭವಾದ ಸಂಘಟನೆಯಲ್ಲಿ ಇಂದು ದೇಶಾದ್ಯಂತ 2 ಕೋಟಿ ಸದಸ್ಯತ್ವವಿದೆ ಎಂದರು.
ರಾಜ್ಯ ಕಾರ್ಯಾಧ್ಯಕ್ಷ ಎಚ್.ವಿ.ಶೇಷಾದ್ರಿ ಮಾತನಾಡಿ, ದೇಶದ ಕಾರ್ಮಿಕ ವರ್ಗವನ್ನು ಸಂಘಟಿಸಲು ಶ್ರಮಿಸಿದವರಲ್ಲಿ ಕಾಂ.ಗುರುದಾಸ್ ದಾಸ್ ಗುಪ್ತ ಪ್ರಮುಖರು. ಬದುಕಲು ಹೋರಾಡಬೇಡಿ, ಹೋರಾಟ ಮಾಡಲು ಬದುಕಿ ಎಂದು ನಮ್ಮನ್ನೆಲ್ಲ ಎಚ್ಚರಿಸುತ್ತಿದ್ದರು ಎಂದು ಸ್ಮರಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕಾಂ.ದೇವದಾಸ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ರೇವಣ್ಣ, ಉಪಾಧ್ಯಕ್ಷರಾದ ಇಕ್ಬಾಲ್ ಪಾಷ, ಬಸವರಾಜ್, ತ್ಯಾಗರಾಜ್, ಕಾರ್ಯದರ್ಶಿ ರಾಮಣ್ಣ, ಶಿವಣ್ಣ, ಸುರೇಶ್, ಮಹದೇವಮ್ಮ, ಜಗನ್ನಾಥ್, ಖಜಾಂಚಿ ಪ್ರಸಾದ್ ಇದ್ದರು.