

ರಾಯಚೂರು: ಮನಸ್ಸಿಗೆ ಸಂಸ್ಕಾರ ಕೊಡಬೇಕು ಎನ್ನುವ ಕಾರಣಕ್ಕೆ ಹಿರಿಯರು ಹುಡುಕಿದ ಮಾರ್ಗಗಳಲ್ಲಿ ದೇವಸ್ಥಾನಗಳು ಒಂದಾಗಿದ್ದು, ಸರಿ ತಪ್ಪುಗಳನ್ನು ಆಯ್ಕೆ ಮಾಡುವ ಶಕ್ತಿ ಸಂಪಾದಿಸಲು ಧಾರ್ಮಿಕ ತಾಣಗಳಲ್ಲಿ ಸಾಧ್ಯವಾಗುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ದಕ್ಷಿಣ ವಲಯ ಸಂಚಾಲಕ ಜಗದೀಶ ಕಾರಂತ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದೇವಾಲಯ ಸಂವರ್ಧನಾ ಸಮಿತಿಯಿಂದ ಗುರುವಾರ ಏರ್ಪಡಿಸಿದ್ದ ದೇವಾಲಯ ಭಕ್ತ ಮಂಡಳಿ ಚಿಂತನಾ ಸಭೆಯಲ್ಲಿ ಮಾತನಾಡಿ, ಹಿರಿಯರು ವ್ಯಕ್ತಿಗಳ ಮಾನಸಿಕ ಪರಿವರ್ತನೆಗಾಗಿ ದೇವಾಲಯಗಳನ್ನು ಕಟ್ಟಿದ್ದಾರೆ ಎಂದರು.
ಮನುಷ್ಯ ರಾಕ್ಷಸನೂ ಆಗಬಹುದು, ದೈವತ್ವವನ್ನು ಹೊಂದಬಹುದು ಎಂಬುದನ್ನು ಈ ದೇಶದ ಸಂಸ್ಕೃತಿ ತೋರಿಸಿಕೊಟ್ಟಿದೆ. ಸಂಸ್ಕಾರ ಹೊಂದಿದವನು ದೈವತ್ವ ಹೊಂದಿದರೆ, ಸಂಸ್ಕಾರ ಇಲ್ಲದವರು ರಾಕ್ಷಸತ್ವ ಹೊಂದುತ್ತಾರೆ. ನಾವು ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಧರ್ಮ ಎಷ್ಟೇ ಶ್ರೇಷ್ಠವಾಗಿದ್ದರೂ ಆಚರಿಸಲು ನೆಲ, ಅನುಕರಿಸಲು ಜನಾಂಗ ಇಲ್ಲದಿದ್ದರೆ ಪ್ರಯೋಜನವಿಲ್ಲ. ಪಾಶ್ಚಾತ್ಯ ಸಂಸ್ಕೃತಿ ಅಳವಡಿಸುವ ಭರದಲ್ಲಿ ಮನೆಗಳು ಮುರಿಯುತ್ತಿವೆ. ಹೆತ್ತವರನ್ನು ನೋಡಿಕೊಳ್ಳುವುದು ಭಾರ ಎನ್ನುವ ಮನಸ್ಥಿತಿ ಬೆಳೆಯುತ್ತಿದೆ. ತಾಯ್ತನವೇ ಬೇಡ ಎನ್ನುವ ಪರಿಸ್ಥಿತಿ ಬಂದಿದೆ.
ಜಾತಿ ವ್ಯವಸ್ಥೆಯ ಹಿಂದೆ ಯಾರಿದ್ದಾರೆ. ಇದೇ ಹಾದಿಯಲ್ಲಿ ಸಾಗಿದರೆ ಭಾರತ ಭಾರತವಾಗಿ ಉಳಿಯಲು ಸಾಧ್ಯವಿಲ್ಲ. ಭಾರತವನ್ನು ದುರ್ಬಲಗೊಳಿಸಲು ಶತ್ರುಗಳಿರುವ ಏಕೈಕ ಅಸ ಸಮಾಜ ವಿಜಭನೆ. ಭಾರತವನ್ನು ಇಸ್ಲಾಮೀಕರಣ ಮಾಡುವ ಸಂಚು ನಡೆದಿದ್ದು, ಹಿಂದು ಸಮಾಜದ ಆಂತರಿಕ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ ಎಂದು ಜಗದೀಶ ಕಾರಂತ ಹೇಳಿದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದುಗಳು ತಮ್ಮ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬೇಕು. ಈ ನೆಲದ ಅನ್ನದ ಋಣ ಎಲ್ಲರ ಮೇಲಿದ್ದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ, ಜಿಲ್ಲಾ ಸಂಯೋಜಕ ಸದಾನಂದ ಪ್ರಭು ಉಪಸ್ಥಿತರಿದ್ದರು.