ಕಾವೇರಿ ಜಾಗೃತಿ ರಥಯಾತ್ರೆಗೆ ಸಂಭ್ರಮದ ಸ್ವಾಗತ

21ark-2
ಅರಕಲಗೂಡು ತಾಲೂಕು ರಾಮನಾಥಪುರಕ್ಕೆ ಸೋಮವಾರ ಆಗಮಿಸಿದ 14ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯನ್ನು ಗ್ರಾಮಸ್ಥರು ಸ್ವಾಗತಿಸಿದರು. ಚಂದ್ರಮೋಹನ್, ಸಿದ್ದಯ್ಯ, ಸಾದು ಸಂತರು ಇದ್ದರು.
Published on

ಅರಕಲಗೂಡು: ಅಖಿಲ ಭಾರತ ಸನ್ಯಾಸಿ ಸಂಘ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಸೋಮವಾರ ತಾಲೂಕಿನ ರಾಮನಾಥಪುರಕ್ಕೆ ಆಗಮಿಸಿದಾಗ ಸ್ಥಳೀಯರು ಸಂಭ್ರಮದ ಸ್ವಾಗತ ಕೋರಿದರು.

ಕೊಡಗಿನಿಂದ ಕೊಣನೂರು ಮಾರ್ಗವಾಗಿ ರಾಮನಾಥಪುರಕ್ಕೆ ಆಗಮಿಸಿದ ರಥಯಾತ್ರೆಗೆ ಸ್ಥಳೀಯರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಬಳಿಕ ಶ್ರೀರಾಮೇಶ್ವರ ದೇವಸ್ಥಾನ ಸನ್ನಿಧಿ ಕಾವೇರಿ ವಹ್ನಿ ಪುಷ್ಕರಣಿಯಲ್ಲಿ ಆರತಿ ಪೂಜೆ ಸಲ್ಲಿಸಲಾಯಿತು.

ತಾಲೂಕು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಸಿದ್ದಯ್ಯ ಮಾತನಾಡಿ, ಕಾವೇರಿ ನದಿ ಉಳಿವಿಗಾಗಿ ಸಾಧು-ಸಂತರು, ಸಮಿತಿಯವರು ಹಮ್ಮಿಕೊಂಡಿರುವ ರಥಯಾತ್ರೆ ಕೊಡಗಿನ ತಲಕಾವೇರಿಯಿಂದ ಶುರುವಾಗಿ ಕಾವೇರಿ ನದಿ ಬಂಗಾಳಕೊಲ್ಲಿ ಸೇರುವ ತಮಿಳುನಾಡಿನ ಪೂಂಪ್‌ಹಾರ್ ತನಕ ತಲುಪಲಿದೆ. ಜೀವನದಿ ಕಲುಷಿತಗೊಳುತ್ತಿದ್ದು ಈ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು. ಹೊಳೆಗೆ ಕಲ್ಮಷ ತ್ಯಾಜ್ಯ ವಸ್ತುಗಳನ್ನು ಬಿಸಾಡದಂತೆ ನಿಗಾ ವಹಿಸಬೇಕು. ನದಿ ರಕ್ಷಣೆ ಮಾಡಿದರೆ ಇಡೀ ಜೀವ ಸಂಕುಲ ಉಳಿಸಿದಂತೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಚಂದ್ರಮೋಹನ್, ಅಖಿಲ ಭಾರತ ಸನ್ಯಾಸಿ ಸಂಘದ ಶ್ರೀ ವೇದಾನಂದ ಸ್ವಾಮೀಜಿ, ಶ್ರೀ ಆದಿತ್ಯಾನಂದ ಸ್ವಾಮೀಜಿ, ಶ್ರೀ ಶಿವರಾಮನಂದ ಸ್ವಾಮೀಜಿ, ಕಣಿವೆ ಸುರೇಶ್, ಸಮಿತಿಯ ಕುಮಾರಸ್ವಾಮಿ, ಕಾಳಾಬೋಯಿ, ಕೇಶವ, ಶಿವಣ್ಣ, ಸೌಭಾಗ್ಯಾ, ವೆಂಕಟೇಶ್‌ಮೂರ್ತಿ, ಗ್ರಾಮಸ್ಥರು ಇದ್ದರು.

ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪಾರುಪತ್ತೇದಾರ್ ರಮೇಶ್ ಭಟ್ ನೆಲ್ಲಿತೀರ್ಥ ಅವರು ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು.

ಅರಕಲಗೂಡು ತಾಲೂಕು ರಾಮನಾಥಪುರಕ್ಕೆ ಸೋಮವಾರ ಆಗಮಿಸಿದ 14ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯನ್ನು ಗ್ರಾಮಸ್ಥರು ಸ್ವಾಗತಿಸಿದರು. ಚಂದ್ರಮೋಹನ್, ಸಿದ್ದಯ್ಯ, ಸಾದು ಸಂತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net