

ಮಡಿಕೇರಿ: ಕುಟುಂಬದಲ್ಲಿ ಒಗ್ಗಟ್ಟು, ಸಹಬಾಳ್ವೆ ನಡೆಸಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ನಿವೃತ್ತ ಅಧ್ಯಾಪಕ ಹೊಸ್ಕೇರಿ ಗ್ರಾಮದ ಕೆಂಜನ ಕೆಂಚಪ್ಪ ಹೇಳಿದರು.
ಕಾನಡ್ಕ ಕುಟುಂಬದ ಆಶ್ರಯದಲ್ಲಿ ಇತ್ತೀಚೆಗೆ ಯುಗಾದಿ ಹಬ್ಬದ ಪ್ರಯುಕ್ತ ಮರಗೋಡಿನ ಕಾನಡ್ಕ ಕುಟುಂಬದ ಐನ್‌ಮನೆಯಲ್ಲಿ ನಡೆದ ೧೦ನೇ ವರ್ಷದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ. ಅಲ್ಲದೆ ಕುಟುಂಬದಲ್ಲಿ ಒಗ್ಗಟ್ಟು, ಸಹಬಾಳ್ವೆ ನಡೆಸಲು ಸಹಕಾರಿಯಾಗಲಿದೆ ಎಂದರು ಅಭಿಪ್ರಾಯಪಟ್ಟರು.
ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ, ಗೌಡ ಸಮುದಾಯ ಸಂಘಟಿತರಾಗಿ ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಸಲವಾಗಬೇಕು. ಕ್ರೀಡೆ ಎಲ್ಲರನ್ನು ಒಗ್ಗೂಡಿಸುವುದಲ್ಲದೆ, ಸಂಘಟನೆಗೂ ಸಹಕಾರಿಯಾಗಲಿದೆ. ಎಲ್ಲಾ ಭಾಗದಲ್ಲ್ಲೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು. ಜತೆಗೆ ಅರೆಭಾಷಿಕ ಸಮುದಾಯದ ಸಂಸ್ಕೃತಿ, ಪದ್ಧತಿಯನ್ನು ಪೋಷಕರು ಮೊದಲು ತಿಳಿದುಕೊಂಡು ಯುವ ಸಮೂಹಕ್ಕೆ ಪರಿಚಯಿಸುವ ಕಾರ್ಯವಾಗಬೇಕು. ಜೀವನದಲ್ಲಿ ನೋವು-ನಲಿವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದರು.
ಕುಟುಂಬಸ್ಥರೆಲ್ಲ ಒಂದೆಡೆ ಸೇರಿ ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಮತ್ತು ಒಗ್ಗಟ್ಟನ್ನು ಕಾಯ್ದುಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಸಂತೋಷ್ ಹೇಳಿದರು.
ಕುಟುಂಬದ ಹಿರಿಯರಾದ ಕಾನಡ್ಕ ನಂಜಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಕಾನಡ್ಕ ಉಲ್ಲಾಸ್ ಹಾಜರಿದ್ದರು.
ಕಾರ್ಯಕ್ರಮದ ಮೊದಲಿಗೆ ಅತ್ಯಾಡಿ ಪ್ರೀತು ಪ್ರಾರ್ಥಿಸಿದರು. ಕಾನಡ್ಕ ಪ್ರಸಾದ್ ಸ್ವಾಗತಿಸಿದರು. ಕಾನಡ್ಕ ಹರೀಶ್ ನಿರೂಪಿಸಿದರು, ಕಾನಡ್ಕ ಚರಣ್ ಉಪಸ್ಥಿತರಿದ್ದರು. ಕಿರಿಯರು ಹಾಗೂ ಹಿರಿಯರಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಳಿಗೆ ಕೃಷ್ಣ ರುಕ್ಮಿಣಿ ಓಟ, ರಾಮಸೀತೆ ಓಟ, ಬಾಲ್ ಬ್ಯಾಲೆನ್ಸ್ ಓಟ, ಹನುಮಂತನ ಓಟ, ಹಗ್ಗಜಗ್ಗಾಟ ಸೇರಿದಂತೆ ಸುಮಾರು ೨೦ ರೀತಿಯ ಆಟೋಟದ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳಲ್ಲಿ ಕುಟುಂಬದ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮಕ್ಕಳಿಗೆ ಹಿರಿಯರು ಹೇಳಿಕೊಡಬೇಕು. ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ದೂರದ ಊರುಗಳಲ್ಲಿ ನೆಲೆಸಿರುವ ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಲು ಅವಕಾಶ ದೊರೆತಂತ್ತಾಗುತ್ತದೆ ಎಂದು ಹೇಳಿದರು.
ಕುಟುಂಬದ ಹಿರಿಯರಾದ ಕಾನಡ್ಕ ಚಂಗಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಗೋಡಿನ ಕಾಫಿ ಬೆಳೆಗಾರ ಮುಕ್ಕಾಟೀರ ಲೋಹಿತ್, ಮರಗೋಡು ಗ್ರಾ.ಪಂ ಸದಸ್ಯ ಪರಿಚನ ಶರತ್, ಕಾನಡ್ಕ ಉತ್ತಪ್ಪ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕುಟುಂಬದ ವತಿಯಿಂದ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಕಾನಡ್ಕ ಪ್ರಸಾದ್ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು.