

ಹುಬ್ಬಳ್ಳಿ: ಹುಬ್ಬಳ್ಳಿಯ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ಗುರುವಾರ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಸಂಭ್ರಮದಿಂದ ವಿಸರ್ಜಿಸಲಾಯಿತು.
ಒಟ್ಟು ಮೂರು ದಿನಗಳವರೆಗೆ ಪ್ರತಿಷ್ಠಾಪಿಸಿದ್ದ ಮೂರ್ತಿಗೆ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ರಾಣಿ ಚನ್ನಮ್ಮ ಮೈದಾನ ಉತ್ಸವ ಮಹಾಮಂಡಳಿ ಕಾರ್ಯಕರ್ತರು ವಿವಿಧ ಧಾರ್ವಿುಕ ಕೈಂಕರ್ಯ ನೆರವೇರಿಸಿದರು. ನಂತರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಅವರು ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಪಂಚವಾದ್ಯ, ಡೋಲು, ಝಾಂಜ್ ಹಾಗೂ ಡಿಜೆ ಮೇಳಗಳು ಮೆರವಣಿಗೆಗೆ ಮೆರಗು ತಂದವು. ರಸ್ತೆಯುದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು.
ನೆರೆದವರು ಗಣೇಶ, ಹನುಮಾನ್ ಹಾಗೂ ಶ್ರೀರಾಮನಿಗೆ ಜೈಕಾರ ಮೊಳಗಿಸಿದರು. ಗಣಪತಿ ಬಾಪ್ಪಾ ಮೋರಯಾ..ಎಂದು ಕೇಕೆ ಹಾಕಿದರು. ಡಿಜೆ ಸೌಂಡ್ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೆರವಣಿಗೆಯು ಚನ್ನಮ್ಮ ಮೈದಾನದಿಂದ ಆರಂಭವಾಗಿ ಹಳೇ ಬಸ್ ನಿಲ್ದಾಣ ಮಾರ್ಗವಾಗಿ ನಗರದ ಇಂದಿರಾ ಗಾಜಿನ ಮನೆಯವರೆಗೆ ಸಾಗಿತು. ನಂತರ ಪಕ್ಕದ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಅಮೃತ ದೇಸಾಯಿ, ಪ್ರಮುಖರಾದ ಸಂಜೀವ ಬಡಸ್ಕರ್, ಸುಭಾಷಸಿಂಗ್ ಜಮಾದಾರ, ಹಿಂದುಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಭಕ್ತರು ಇದ್ದರು.