ಮೃಗಾಲಯದ ಗೊರಿಲ್ಲಾಗೆ ಸಂಭ್ರಮ; ಹೊಸ ಮನೆಗೆ ಕ್ವೆಂಬೋ ಗೃಹಪ್ರವೇಶ!

mysore
Published on

ಮೈಸೂರು; ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ‘ಕ್ವೆಂಬೋ’ ಹೆಸರಿನ ಗೊರಿಲ್ಲಾಗೆ ಹೊಸದಾಗಿ ಸೂರು ಕಲ್ಪಿಸಿಕೊಡಲಾಗಿದೆ. ಗೃಹಪ್ರವೇಶ ಮಾಡಿದ ಬಳಿಕ ಕ್ವೆಂಬೋ ಹೊಸ ಮನೆಯಲ್ಲಿ ಸಂಭ್ರಮಿಸಿ ನಲಿಯಿತು.


ದೇಶದ ಮೃಗಾಲಯಗಳಲ್ಲೇ ಗೊರಿಲ್ಲಾಗಳು ಇರುವುದು ಮೈಸೂರು ಮೃಗಾಲಯದಲ್ಲಿ ಮಾತ್ರ. ಇಲ್ಲಿ ಮೂರು ಗಂಡು ಗೊರಿಲ್ಲಾಗಳಿವೆ. ಇನ್ಫೋಸಿಸ್ ಫೌಂಡೇಷನ್ ಸಿಎಸ್‌ಆರ್ ಅಡಿ ನೀಡಿದ ಹಣಕಾಸು ಸಹಾಯದಿಂದ ನವೀನವಾಗಿ ನಿರ್ಮಾಣವಾಗಿರುವ ಗೊರಿಲ್ಲಾ ಆವರಣವನ್ನು ಗುರುವಾರ ಉದ್ಘಾಟಿಸಲಾಯಿತು.


ಗಂಡು ಗೊರಿಲ್ಲಾ ‘ಕ್ವೆಂಬೋ’ ಈ ಹೊಸ ಮನೆಯ ವಾಸಿ. ಇದನ್ನು ಇತ್ತೀಚೆಗೆ ಜರ್ಮನಿ ದೇಶದ ಫ್ರಾಂಕ್‌ಫರ್ಟ್ ಮೃಗಾಲಯದಿಂದ ತರಲಾಗಿತ್ತು. ಈ ಪ್ರಾಣಿ ಆವರಣದ ವಿಸ್ತಾರ 37 ಸಾವಿರ ಚದರ ಅಡಿಯಾಗಿದ್ದು, ಈ ಕಾಮಗಾರಿಗೆ 5 ಕೋಟಿ ರೂ. ವೆಚ್ಚವಾಗಿದೆ. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಇನ್ಫೋಸಿಸ್ ಫೌಂಡೇಷನ್ ಕೊಡುಗೆಯಾಗಿ ನೀಡಿದೆ.


‘ಇದು ಅಳಿವಿನಂಚಿನಲ್ಲಿರುವ ಗೊರಿಲ್ಲಾದಂತಹ ದೊಡ್ಡವಾನರ ಪ್ರಾಣಿಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿಶೇಷವಾಗಿ ಗೊರಿಲ್ಲಾವನ್ನು ನೋಡಲು ಇವುಗಳನ್ನು ಹೊಂದಿರುವ ಇತರ ದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗದ ಜನರು ಇಲ್ಲಿಗೆ ಭೇಟಿ ನೀಡಬಹುದು. ಸದ್ಯಕ್ಕೆ ಇಡೀ ದೇಶದಲ್ಲೇ ಮೈಸೂರು ಮೃಗಾಲಯ ಮಾತ್ರ ಗೊರಿಲ್ಲಾಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್ ತಿಳಿಸಿದ್ದಾರೆ.


ಗೊರಿಲ್ಲಾ ಪ್ರಾಣಿ ಆವರಣವನ್ನು ಇನ್ಫೋಸಿಸ್ ಫೌಂಡೇಷನ್ ನಿರ್ದೇಶಕಿ ಶ್ರುತಿ ಖುುರಾನ ಉದ್ಘಾಟಿಸಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಕೆ.ಸಿಂಗ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net