ಘಾಟಿಯಲ್ಲಿ ದನಗಳ ಜಾತ್ರೆ ಕಲರವ

2
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ದೇವನಹಳ್ಳಿ ರೈತ ಹೋರಿ ಪುಟ್ಟಣ್ಣ ಅವರ ಎತ್ತುಗಳು 12 ಲಕ್ಷ ರೂ.ಗೆ ಮಾರಾಟಕ್ಕೆ ಕಟ್ಟಿರುವುದು.
Published on

₹12 ಲಕ್ಷ ಬೆಲೆಬಾಳುವ ಜೋಡಿ ಹೋರಿ - ನೋಡುಗರ ಕಣ್ಣಿಗೆ ಹಬ್ಬ

ತೂಬಗೆರೆ:ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಶುಕ್ರವಾರ ಚಾಲನೆ ದೊರೆತಿದ್ದು, ಡಿ.28ರವರೆಗೆ ನಡೆಯಲಿದೆ.

ಜಾತ್ರೆಗೆ ದೂರದ ಊರುಗಳಿಂದ ಹೋರಿಗಳೊಂದಿಗೆ ರೈತರು ಬರುತ್ತಿದ್ದಾರೆ. ಹೋರಿ ಕಟ್ಟುವ ಸ್ಥಳವನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಮಾದರಿಯಲ್ಲಿ ಪೆಂಡಾಲ್ ನಿರ್ಮಿಸುವ ರೈತರ ಸಂಖ್ಯೆಯೂ ಈ ಬಾರಿ ಹೆಚ್ಚಾಗಿದೆ. ಹೋರಿಗಳು ಮಲಗಲು ವಿಶೇಷವಾಗಿ ನಿರ್ಮಿಸಿರುವ ಮೆತ್ತನೆಯ ಹುಲ್ಲಿನ ಹಾಸಿಗೆ, ಪೆಂಡಾಲ್‌ಗೆ ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿರುವುದು ಕೊಳ್ಳುವವರಿಗೆ ಹಾಗೂ ನೋಡುಗರ ಕಣ್ಣಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.

ಕೃಷಿ ಕೆಲಸಕ್ಕೆ ಬೇಕಾಗುವ ಹೋರಿ ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಹಾಗೂ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದ ಕೊಲ್ಲಾಪುರ ಭಾಗಗಳಿಂದ ರೈತರ ಆಗಮಿಸಿದ್ದು, ಖರೀದಿ ಭರಾಟೆ ಜೋರಾಗಿದೆ.

ಬಗೆಬಗೆಯ ತಳಿಯ ರಾಸು: ಜಾತ್ರೆಗೆ ಅಮೃತ್ ಮಹಲ್, ಹಳ್ಳಿಕಾರ್ ಸೇರಿ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬಂದಿವೆ. ಬೆಂಗಳೂರಿಗೆ ಸಮೀಪದಲ್ಲೇ ಘಾಟಿ ದನಗಳ ಜಾತ್ರೆ ವೀಕ್ಷಣೆಗೆ ನೋಡುಗರ ಸಂಖ್ಯೆಯೂ ಹೆಚ್ಚಾಗಿದೆ. ಜಾತ್ರೆಯಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ ನಿರ್ಮಿಸುವುದು, ಜಾತ್ರೆಗೆಂದೇ ಹೋರಿಗಳನ್ನು ಕರೆತರುವುದು ಇತ್ತೀಚಿನ ದಿನಗಳಲ್ಲಿ ಕೆಲ ರೈತರು ಪ್ರತಿಷ್ಠೆಯ ಸಂಗತಿ ಎಂದು ಭಾವಿಸಿದ್ದು, ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.

ದುಬಾರಿ ಬೆಲೆ ಹೋರಿಗಳು: ಈ ಹಿಂದಿನ ಜಾತ್ರೆಯಲ್ಲಿ ಜೋಡಿ ಹೋರಿಗಳನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ ಸುಮಾರು 12 ಲಕ್ಷ ರೂ.ಬೆಲೆ ಬಾಳುವ ಹೋರಿಗಳು ಬಂದಿವೆ. ಅಂತೆಯೇ, ರಾಸುಗಳ ಕೊರಳಿಗೆ ಕಟ್ಟುವ ಕಂಬಳಿ ದಾರ, ಗಂಟೆಗಳು, ಬಣ್ಣ ಬಣ್ಣದ ಬಾರು ಕೋಲುಗಳು, ಗಂಟೆ ಸರ, ರಾಗಿ ಒಕ್ಕಣೆಯಲ್ಲಿ ಬಳಸುವ ವಿವಿಧ ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳು ವ್ಯಾಪಾರಕ್ಕೆ ಸಿದ್ಧಗೊಂಡಿವೆ.

ಈ ಹಿಂದೆ ಹೋರಿಗಳನ್ನು ಕಟ್ಟುವ ರೈತರು ಮಾತ್ರ ಬಾರುಕೋಲು ಖರೀದಿಸುತ್ತಿದ್ದರು. ಆದರೆ, ಇತ್ತೀಚಿಗೆ ಜಾತ್ರೆಯಲ್ಲಿ ಬಣ್ಣ ಬಣ್ಣದ ಬಾರು ಕೋಲು ಖರೀದಿಸುವುದು ಶೋಕಿಯಾಗಿದೆ. ಹಾಗಾಗಿ ಜಾತ್ರೆಗೆ ಬರುವ ಮಕ್ಕಳು, ಅದರಲ್ಲೂ ಯುವ ಸಮುದಾಯ ಬಾರು ಕೋಲು ಕೈಯಲ್ಲಿ ಹಿಡಿದು ಒಡಾಡುವ ದೃಶ್ಯ ಕಂಡುಬರುತ್ತಿವೆ.

ಜಿಲ್ಲಾಧಿಕಾರಿ ಮನವಿ

ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಬಳಕೆ ನೀಷೇಧಿಸಿದೆ. ದೇವಾಲಯದ ಆವರಣದಲ್ಲಿರುವ ಅಂಗಡಿ, ಮಳಿಗೆಗಳು, ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರ ಹಾಗೂ ಆಂಬುಲೆನ್ಸ್ ಸೇವೆ ಒದಗಿಸುವಂತೆ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಾತ್ರೆಯಲ್ಲಿ ಕಳವು ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು, ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ.

ಜಾತ್ರೆಗೆ ಬರುವ ಎತ್ತುಗಳಿಗೆ ಸುಂಕವಿಲ್ಲ, ರಾಜ್ಯದ ಮೂಲೆ ಮೂಲೆಗಳಿಂದ ಬರುವ ರೈತರಿಗೆ ದೇವಾಲಯದ ವತಿಯಿಂದ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಹಾಗೂ ರೈತರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. -ಎಂ.ನಾರಾಯಣಸ್ವಾಮಿ ಘಾಟಿ ಸುಬ್ರಮಣ್ಯ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ

ಘಾಟಿ ದನಗಳ ಜಾತ್ರೆಯಲ್ಲಿ ಎತ್ತುಗಳ ಬೆಲೆ ದುಬಾರಿ ಯಾಗಿವೆ. ಈ ಹಿಂದೆ 2 ಲಕ್ಷ ರೂ. ಇತ್ತು. ಈಗ ಬೆಲೆ 12 ಲಕ್ಷ ರೂ.ಗೆ ಏರಿಕೆಯಾಗಿವೆ. ಚಿಕ್ಕ ಹೋರಿ ಕೊಳ್ಳಲು ಕೂಡ ಆಗುತ್ತಿಲ್ಲ. -ಶಂಕರ್ ರೆಡ್ಡಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net