ಸುರೇಶ್‌ಗೌಡ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಒತ್ತಾಯ

2 (5)
Published on

ಮಂಡ್ಯ: ನಾಗಮಂಗಲದ ಕೆಎಸ್‌ಆರ್‌ಟಿಸಿ ನೌಕರ ಜಗದೀಶ್ ಆತ್ಮಹತ್ಯೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಿಎಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಆ್ಯಂಬುಲೆನ್ಸ್ ತಡೆದು ರೋಗಿಯ ಆರೋಗ್ಯದ ಜೀವದ ಜತೆ ಚೆಲ್ಲಾಟವಾಡಿರುವ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಪೊಲೀಸರು ಸ್ವಯಂಪ್ರೇರಿತರಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಆಗ್ರಹಿಸಿದರು.

ಆತ್ಮಹತ್ಯೆ ಪ್ರಕರಣವನ್ನು ಜೆಡಿಎಸ್ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಘಟನೆ ನಡೆದ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಸುರೇಶ್‌ಗೌಡ ತನ್ನ ಬೆಂಬಲಿಗರ ಜತೆ ನಡುರಸ್ತೆಯಲ್ಲಿ ತುರ್ತು ವಾಹನವನ್ನು ತಡೆಯುವುದರ ಹಿಂದೆ ಷಡ್ಯಂತ್ರ ಅಡಗಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯಾವುದೇ ರೋಗಿಗೆ ಕ್ಲಿಷ್ಟ ಸಂದರ್ಭದಲ್ಲಿ ತುರ್ತು ಇದ್ದಾಗ ಪ್ರತಿಯೊಂದು ನಿಮಿಷವೂ ಪ್ರಮುಖವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ರೋಗಿಯ ಪ್ರಾಣದ ಜತೆ ಚೆಲ್ಲಾಟವಾಡಿ ಪ್ರಕರಣವನ್ನು ರಾಜಕೀಯಗೊಳಿಸಲು ಇಂತಹ ಕೃತ್ಯವೆಸಗಿರುವುದು ಸುರೇಶ್‌ಗೌಡರಿಗೆ ಶೋಭೆ ತರುವುದಿಲ್ಲ. ಕೂಡಲೇ ಅವರು ಚಲುವರಾಯಸ್ವಾಮಿ ಮತ್ತು ಜಿಲ್ಲೆಯ ಜನರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇನ್ನು ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಹೊರತೆಗೆಯಲಿ. ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ಥಾನದ ಘನತೆಯನ್ನು ಮರೆತು ವಿಧಾನಸಭಾ ಅಧಿವೇಶನದಲ್ಲಿ ಹತಾಶರಾಗಿ ತಮ್ಮ ರಾಜಕೀಯ ವೈರತ್ವ ತೀರಿಸಿಕೊಳ್ಳಲು ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ರಾಜಕೀಯವಾಗಿ ತುಳಿದು, ತಮ್ಮ ಪಟಾಲಂಗಳ ಮೂಲಕ ಜಿಲ್ಲೆಯ ಹಿಡಿತ ಸಾಧಿಸಲು ಹೊರಟಿದ್ದಾರೆ. 2018ರಲ್ಲಿ ಜಿಲ್ಲೆಯ ಜನತೆ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದಾಗ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಕೇವಲವಾಗಿ ಕಂಡಿದ್ದರು. ಅವಹೇಳನಕಾರಿ ಮಾತುಗಳಿಂದ ನಿಂದಿಸಿ ಅಪಹಾಸ್ಯ ಮಾಡಿದರು. ಅದರ ಪರಿಣಾಮ ಕಳೆದ ಐದು ವರ್ಷಗಳಲ್ಲಿ ಒಂದು ಚುನಾವಣೆ ಗೆಲ್ಲಲು ಕುಮಾರಸ್ವಾಮಿ ಮತ್ತು ಅವರ ಪಕ್ಷದ ನಾಯಕರಿಗೆ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಎಚ್.ಡಿ.ದೇವೇಗೌಡ ಅವರ ಸೇವೆ ಮತ್ತು ಹೋರಾಟದ ಫಲವಾಗಿ ಕುಮಾರಸ್ವಾಮಿ ರಾಜಕೀಯವಾಗಿ ಎಲ್ಲ ಸ್ಥಾನಮಾನ ಅನುಭವಿಸಿದ್ದಾರೆ. ಆದರೆ ಅವರ ದುರಂಹಕಾರದ ನಡವಳಿಕೆ ಮತ್ತು ದ್ವೇಷ ರಾಜಕಾರಣದ ಪ್ರತಿಫಲದಿಂದಾಗಿ ಅವರ ಮಗ ನಿಖಿಲ್‌ಕುಮಾರಸ್ವಾಮಿ ರಾಜಕೀಯವಾಗಿ ಏಳಿಗೆಯಾಗುತ್ತಿಲ್ಲ. ಆದ್ದರಿಂದ ಕುಮಾರಸ್ವಾಮಿ ಅವರು ಇನ್ನು ಮುಂದಾದರೂ ದೇವೇಗೌಡರಿಂದ ತಿಳವಳಿಕೆ ಪಡೆದು ನಾಡಿನ ಒಳಿತಿಗೆ ದುಡಿಯಲಿ ಎಂದು ಸಲಹೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಲೋಕೇಶ್, ಸದಸ್ಯ ಶ್ರೀಧರ್, ತಾಪಂ ಮಾಜಿ ಸದಸ್ಯ ಕೆ.ಸಿ.ಪ್ರಶಾಂತಬಾಬು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್, ನರಸಪ್ಪ ಹೆಗಡೆ, ನಿಂಗರಾಜು, ನಿಂಗೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net