ಖೊಟ್ಟಿ ದಾಖಲೆ ಸೃಷ್ಟಿಸಿದಿ ಭೂ ಕಬಳಿಕೆ ಪ್ರಕರಣ, ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದ ದಸ್ತು ಬರಹಾರರು !

BOND WRAITER PROTEST
ವಿಜಯಪುರದ ಉಪ ನೋಂದಣಿ ಇಲಾಖೆ ಕಚೇರಿಯಲ್ಲಿರುವ ದಸ್ತು ಬರಹಗಾರರು ಕೆಲಸ ಸ್ಥಗಿತಗೊಳಿಸಿದ್ದರಿಂದ ಬಿಕೋ ಎನ್ನುತ್ತಿರುವ ಮಹಡಿ.
Published on

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಂದಾಗಿ ದಸ್ತು ಬರಹಗಾರರಿಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ದಸ್ತು ಬರಹಗಾರರು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಿದರು.

ಇಲ್ಲಿನ ಸೋಲಾಪುರ ರಸ್ತೆಯಲ್ಲಿರುವ ಉಪ ನೋಂದಣಿ ಇಲಾಖೆಯಲ್ಲಿ ಬೆಳಗ್ಗೆಯೇ ತಮ್ಮ ತಮ್ಮ ಕಚೇರಿಯನ್ನು ಬಂದ್‌ಗೊಳಿಸಿ ಹೊರನಡೆದ ದಸ್ತು ಬರಹಗಾರರು ಯಾವುದೇ ಪ್ರತಿಭಟನೆ ನಡೆಸದೇ, ಘೋಷಣೆ ಕೂಗದೇ ಮೌನವಾಗಿಯೇ ತಮ್ಮ ಸೇವೆ ಸ್ಥಗಿತಗೊಳಿಸಿ ಸಾತ್ವಿಕ ಸಿಟ್ಟು ಹೊರಹಾಕಿದರು.

ನಗರದಲ್ಲಿ ಕೆಲ ದಿನಗಳಿಂದ ಕೆಲ ವ್ಯಕ್ತಿಗಳು ಆಸ್ತಿಗಳಿಗೆ ಸಂಬಂಸಿದಂತೆ ತಪ್ಪು ಮಾಹಿತಿ ನೀಡಿ ದಸ್ತಾವೇಜುಗಳನ್ನು ತಯಾರಿಸಿ ನೋಂದಣಿ ಮಾಡಿಸುತ್ತಿರುವ ಪ್ರಕ್ರಿಯೆ ನಡೆಸಿದ್ದರಿಂದ ಆಸ್ತಿ ಮಾಲೀಕರಿಗೆ ಹಾಗೂ ನಮಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ನೋಂದಣಾಧಿಕಾರಿಗೆ ಮನವಿ ಕೂಡ ಸಲ್ಲಿಸಿದರು.

ನೋಂದಣಿ ಇಲಾಖೆ ನಿರ್ದೇಶನದ ಪ್ರಕಾರ ಅನೇಕ ವರ್ಷಗಳಿಂದ ಬಸ್ತು ಬರಹಗಾರರಾಗಿ ವ್ಯವಸ್ಥಿತ ಹಾಗೂ ಗೌರವಯುತವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕೆಲವರು ಆಸ್ತಿಗಳ ಖೊಟ್ಟಿ ದಾಖಲೆ ಸೃಷ್ಟಿಸಿ, ನಮಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದರು.

ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಆದಾಗ್ಯೂ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ನಮಗೆ ಆತಂಕ ಎದುರಾಗಿದೆ. ಭೂ ಹಗರಣ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ. ಅಂಥ ಕೆಲಸವನ್ನು ನಾವು ಮಾಡುವುದಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಚಟುವಟಿಕೆಗೆ ನಮ್ಮ ವಿರೋಧವಿದೆ ಎಂದು ದಸ್ತು ಬರಹಗಾರರು ತಿಳಿಸಿದರು.

ಆಸ್ತಿಗೆ ಸಂಬಂಸಿದಂತೆ ಖೊಟ್ಟಿ ದಾಖಲೆ ಸೃಷ್ಟಿಸುತ್ತಿರುವುದು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯ ತನಕ ನಾವು ದಸ್ತು ಬರಹ ಕೆಲಸವನ್ನು ಬಂದ್ ಮಾಡುತ್ತೇವೆ ಎಂದು ತಿಳಿಸಿದರು.

ನಕಲಿ ದಾಖಲೆ ಸೃಷ್ಟಿ. ಆಸ್ತಿ ಕಬಳಿಕೆಯಿಂದ ಸಾರ್ವಜನಿಕರಿಗೆ ಹಾಗೂ ನಮಗೆ ಆಗುತ್ತಿರುವ ತೊಂದರೆ ಬಗೆಹರಿಸಲು ಇಲಾಖೆಗೆ ನಾವು ಸಹಕಾರ ನೀಡುತ್ತೇವೆ. ಆದರೆ ಯಾರಿಗೂ ತೊಂದರೆ ಕೊಡುವ ಉದ್ದೇಶ ನಮಗಿಲ್ಲ ಎಂದು ದಸ್ತು ಬರಹಗಾರರು ತಿಳಿಸಿದ್ದಾರೆ.

ವಿಜಯಪುರ ಉಪ ನೋಂದಣಾಕಾರಿ ಕಚೇರಿಯಲ್ಲಿ ನಿತ್ಯ 150-200 ಆಸ್ತಿಗಳ ನೋಂದಣಿ ಕಾರ್ಯ ನಡೆಯಲಿದ್ದು, ಸರ್ಕಾರಕ್ಕೆ ನಿತ್ಯ 30 ಲಕ್ಷ ರೂ. ತೆರಿಗೆ ಸಂಗ್ರಹವಾಗಲಿದೆ. ಸುಮಾರು 30 ದಸ್ತು ಬರಹಗಾರರು ಕೆಲಸ ನಿರ್ವಹಿಸುತ್ತೇವೆಂದು ದಸ್ತು ಬರಹಗಾರರೊಬ್ಬರು ಮಾಹಿತಿ ನೀಡಿದರು. ಸೇವೆ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net