

ಶಿವಮೊಗ್ಗ: ಕಳೆದ ತಿಂಗಳು ಬೈಕ್‌ನಲ್ಲಿ ಬಂದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ರೌಡಿಶೀಟರ್ ಬಲಗಾಲಿಗೆ ತುಂಗಾನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ರೌಡಿಶೀಟರ್ ಅಮ್ಮು ಅಲಿಯಾಸ್ ಹಬೀಬುಲ್ಲಾ ಕಾಲಿಗೆ ಗುಂಡೇಟು ಬಿದ್ದಿದೆ. ಸೆ.13ರಂದು ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಬಗ್ಗೆ 109 ಬಿಎನ್‌ಎಸ್ ಅಡಿ ಪ್ರಕರಣ ದಾಖಲಾಗಿತ್ತು.
ನಗರದ ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್‌ನಲ್ಲಿ ಸೋಮವಾರ ಬೆಳಗ್ಗೆ ಹಬೀಬುಲ್ಲಾ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೆರಳಿದ್ದ ಪೊಲೀಸರು, ಆತನನ್ನು ಬಂಧಿಸಲು ಮುಂದಾಗಿದ್ದರು. ಈ ಸಂದರ್ಭ ಹಬೀಬುಲ್ಲಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದ್ದ. ಶರಣಾಗುವಂತೆ ಮನವೊಲಿಸುವ ಪ್ರಯತ್ನ ಮಾಡಿದರೂ ಮಾತು ಕೇಳದೇ ಸಿಬ್ಬಂದಿ ಮೇಲೆ ಹಲ್ಲೆ ಗೆ ಯತ್ನಿಸಿದ್ದ ಕಾರಣಕ್ಕೆ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಬಲಗಾಲಿಗೆ ಗುಂಡು ತಗುಲಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಕೊಲೆ ಯತ್ನ ಪ್ರಕರಣದಲ್ಲಿ ಅಮ್ಮುವಿನ ಹುಡುಕಾಟದಲ್ಲಿ ನಮ್ಮ ಪೊಲೀಸರಿದ್ದರು. ಗರುಡಾ ಲೇಔಟ್‌ನಲ್ಲಿ ಆತ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತುಂಗಾನಗರ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದಾಗ ಸಿಬ್ಬಂದಿ ಜಯಪ್ಪ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇನ್‌ಸ್ಪೆಕ್ಟರ್ ಗುರುರಾಜ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದರು.
ಅಮ್ಮುವಿನ ವಿರುದ್ಧ 2019ರಲ್ಲಿ ಮರ್ಡರ್ ಪ್ರಕರಣ ಇದೆ. ಅಲ್ಲದೆ ರಕ್ತಚಂದನ ಸಾಗಣೆ ಸಂಬಂಧ ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ಎರಡು ಪ್ರಕರಣ ದಾಖಲಾಗಿವೆ. ಈತನಿಗೆ ಅಪರಾಧದ ಹಿನ್ನೆಲೆಯೂ ಇದೆ ಎಂದು ತಿಳಿಸಿದ್ದಾರೆ.