

ಕೊಪ್ಪ: ಒತ್ತುವರಿ ತೆರವು ಹೆಸರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮರ, ಗಿಡಗಳನ್ನು ಕಡಿಯುತ್ತಿದ್ದಾರೆ. ಇಲಾಖೆಗೆ ಗಿಡಗಳನ್ನು ಬೆಳೆಸುವ ಹಕ್ಕು ಇದೆಯೆ ಹೊರತು ಕಡಿಯುವ ಹಕ್ಕು ಇಲ್ಲ. ಇನ್ನುಮುಂದೆ ಗಿಡ ಕಡಿದರೆ ಇಲಾಖೆ ವಿರುದ್ಧ ಜೆಡಿಎಸ್‌ನಿಂದ ಕೇಸ್ ದಾಖಲಿಸಲಾಗುತ್ತದೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು.
ಅರಣ್ಯ ಸಚಿವರು 2015ರ ನಂತರದ ಒತ್ತುವರಿ ತೆರವುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ. ಸಚಿವರಿಗೆ ಚಿಕ್ಕಮಗಳೂರಿನ ಪರಿಸರದ ಬಗ್ಗೆ ತಿಳಿದಿಲ್ಲ. ಬಡವರು ಜೀವನಕ್ಕಾಗಿ ಎರಡ್ಮೂರು ಎಕರೆ ಜಮೀನು ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದಾರೆ. ಈ ಭೂಮಿಯನ್ನು ಖುಲ್ಲಾಪಡಿಸಿದಲ್ಲಿ ರೈತರ ಬದುಕು ಬೀದಿಗೆ ಬರುತ್ತದೆ. ರೈತರನ್ನು ಅರಣ್ಯ ಇಲಾಖೆ ಇಂಥ ಪರಿಸ್ಥಿತಿಗೆ ದೂಡಿದಲ್ಲಿ ಜೆಡಿಎಸ್‌ನಿಂದ ಆಮರಣಾಂತ ಉಪವಾಸ ನಡೆಸಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಮಲೆನಾಡಿನಲ್ಲಿ ನಾಲೈದು ತಲೆಮಾರಿನಿಂದ ಕೃಷಿಕರು ಜೀವನಕ್ಕಾಗಿ ಭೂಮಿ ಒತ್ತುವರಿ ಮಾಡಿದ್ದಾರೆ. ಈಗ ಇಲ್ಲಸಲ್ಲದ ಆದೇಶವಿದೆ ಎಂದು ಅರಣ್ಯ ಇಲಾಖೆ ಖುಲ್ಲಾಪಡಿಸಲು ಮುಂದಾಗಿದೆ. ಜಂಟಿ ಸರ್ವೇ ನಡೆದಿಲ್ಲ. ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವ ವೇಳೆಯಲ್ಲಿ ಒತ್ತುವರಿ ತೆರವಿಗೆ ಮುಂದಾಗಿರುವುದು ಸರಿಯಲ್ಲ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಶಾಸಕರೂ ಕಾಂಗ್ರೆಸ್‌ನವರು. ಅವರದೇ ಸರ್ಕಾರವಿದ್ದರೂ ಆಡಳಿತಾತ್ಮಕ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಆ.17ರಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಕೊಪ್ಪದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜೆಡಿಎಸ್ ಬೆಂಬಲವಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಬಡ, ಮಧ್ಯಮ ವರ್ಗದ ರೈತರ ಪರ ನಿರಂತರವಾಗಿ ಪಕ್ಷ ಹೋರಾಟ ಮಾಡುತ್ತದೆ ಎಂದು ತಿಳಿಸಿದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಎನ್.ಆರ್ ಪುರ ಅಧ್ಯಕ್ಷ ಚಂದ್ರಶೇಖರ್, ಶೃಂಗೇರಿ ಅಧ್ಯಕ್ಷ ಭರತ್, ದೀಪಕ್, ಯೇಸುದಾಸ್ ಇತರರಿದ್ದರು.