

ಮೈಸೂರು: ಆಡಳಿತಾಧಿಕಾರಿಯ ವೃತ್ತಿ ಜೀವನವು ಹಗ್ಗದ ಮೇಲಿನ ನಡಿಗೆಯಂತೆ. ಗುರಿಯೆಡೆಗೆ ಸಾಗುತ್ತಿದ್ದರೂ ಸವಾಲುಗಳನ್ನು ಎದುರಿಸಲು ತನ್ನಲ್ಲಿರುವ ಸಾಮರ್ಥ್ಯ ಮತ್ತು ಸಂಪನ್ಮೂಲವನ್ನು ಸಮತೋಲನದಿಂದ ವಿನಿಯೋಗಿಸಬೇಕಾಗುತ್ತದೆ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳ ಸೇವಾ ವಿಭಾಗದ ಅಧ್ಯಕ್ಷೆ ರಾಜಯೋಗಿನಿ ಬ್ರಹ್ಮಕುಮಾರಿ(ಬಿಕೆ) ಆಶಾಜೀ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮೈಸೂರು ತಾಲೂಕು ಲಿಂಗದೇವರಕೊಪ್ಪಲಿನಲ್ಲಿರುವ ಸಂಸ್ಥೆಯಲ್ಲಿ ಭಾನುವಾರ ಅಧಿಕಾರಿಗಳಿಗೆ ಆಯೋಜಿಸಿದ್ದ ಸಮಯದ ಕರೆ - ಸಕಾರಾತ್ಮಕ ಬದಲಾವಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬದಲಾವಣೆಯನ್ನು ಹೆಚ್ಚು ಜನ ಇಷ್ಟ ಪಡುವುದಿಲ್ಲ. ಕೆಲವರು ಬಲವಂತವಾಗಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸಂತೋಷದಿಂದ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೂ ಬದಲಾವಣೆ ಜಗದ ನಿಯಮ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಗುರಿಯೆಡೆಗೆ ಸಾಗುವಾಗ ಯಾವ ಕಡೆಗೆ ವಾಲಿದರೂ ಅಸಮತೋಲನ ಉಂಟಾಗಿ ಕೆಲಸದಲ್ಲಿ ಅಸಂತುಷ್ಟಿ ಮತ್ತು ಒತ್ತಡ ಕಾಣಬರುತ್ತವೆ. ಹಾಗಾಗಿ ಗುರಿಯೆಡೆಗೆ ದೃಷ್ಟಿಯಿದ್ದರೂ ಉತ್ತಮ ಫಲಿತಾಂಶಕ್ಕಾಗಿ ಸಮತೋಲನೆ ಬಗ್ಗೆ ಗಮನ ಇಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಬ್ರಹ್ಮಕುಮಾರ ಹರೀಶ್ ಅಭಿಯಾನದ ಬಗ್ಗೆ ವಿಚಾರ ಮಾಡಿಸಿದರು. ತಂಡದ ಚರ್ಚೆಯಲ್ಲಿ ಬಿ.ಕೆ. ಸೀತಾರಾಂ ಮೀನಾ, ಡಾ.ಆರ್.ಎಚ್.ಪವಿತ್ರಾ, ಬಿ.ಕೆ. ಗಿರೀಶ್ ಭಾಗವಹಿಸಿದ್ದರು.
ಮೈಸೂರು ಕೇಂದ್ರದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಲಕ್ಷ್ಮೀಜೀ, ಕಾರ್ಯಕ್ರಮ ಆಯೋಜಕರಾದ ಅವಧೇಶ್, ರಂಗನಾಥ್, ವೀಣಾ, ಓಂ ಶಾಂತಿ ನ್ಯೂಸ್ ಸರ್ವಿಸಸ್‌ನ ಆರಾಧ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ರಾಜಯೋಗ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.