ವರವಾಗಿ ಪರಿಣಮಿಸಿದ ಏಲಕ್ಕಿ ಬಾಳೆ

HYR banana spl 04
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಏಲಕ್ಕಿ ಬಾಳೆ ಹಣ್ಣಿಗೆ ಬಂಪರ್ ಬೆಲೆ ಬಂದಿದ್ದು, ಬಯಲುಸೀಮೆ ಬಾಳೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷ ವರುಣ ಹಾಗೂ ಭದ್ರೆ ಕೃಪೆಯಿಂದ ವಿವಿ ಸಾಗರದ ಒಡಲು ಸೇರಿದ್ದು, ವೇದಾವತಿ-ಸುವರ್ಣಮುಖಿ ನದಿ ಪಾತ್ರದಲ್ಲಿ ಅಂತರ್ಜಲ ವೃದ್ಧಿಯಾಗಿ ನೀರಾವರಿ ಕೃಷಿ ವಿಸ್ತರಣೆಯಾಗುತ್ತಿದೆ. ಅಡಕೆ ಜತೆಗೆ ಮಿಶ್ರ ಬೆಳೆಯಾಗಿ ಬಾಳೆ ಕೃಷಿ ಮಾಡುತ್ತಿರುವುದು ಅನ್ನದಾತರ ಬದುಕಿಗೆ ವರದಾನವಾಗಿದೆ.

ಕರೊನಾ ಸಂಕಷ್ಟದ ಸಮಯದಲ್ಲಿ ಸತತ ಎರಡು ವರ್ಷ ಬೆಲೆ ಏರಿಳಿತಕ್ಕೆ ಸಿಲುಕಿದಾಗ ಬಾಳೆ ಬೆಳೆಗಾರರು ದಿಕ್ಕೆಟ್ಟಿದ್ದರು. 1 ಕೆಜಿ ಏಲಕ್ಕಿ ಬಾಳೆ ಧಾರಣೆ 15 ರೂಪಾಯಿಗೆ ಕುಸಿದಾಗ ಕೃಷಿ ವೆಚ್ಚವೂ ಕೈ ಸೇರದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.

2018 ರ ನಂತರ ಬಾಳೆಗೆ ಬಂಪರ್ ಬೆಲೆ ಬಂದಿದ್ದು, ವ್ಯಾಪಾರಿಗಳು ತೋಟಗಳಿಂದ ನೇರವಾಗಿ ಒಂದು ಕೆಜಿ ಏಲಕ್ಕಿ ಬಾಳೆಗೆ 70- ರಿಂದ 80 ರೂ. ದರ ನಿಗದಿ ಮಾಡಿ ಖರೀದಿಸುತ್ತಿದ್ದು, ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳು 100 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು, ಸಾಲು ಹಬ್ಬಗಳು ಬರುವುದರಿಂದ ಏಲಕ್ಕಿ ಬಾಳೆಗೆ ಉತ್ತಮ ದರ ಸಿಗುತ್ತಿದೆ. ಬಾಳೆ ವಾರ್ಷಿಕ ಬೆಳೆಯಾಗಿದೆ. ನಾಟಿ ಮಾಡಿದ 11ನೇ ತಿಂಗಳಿಂದ 14 ತಿಂಗಳವರೆಗೆ ಗೊನೆಗಳು ಕಟಾವಿಗೆ ಬರುತ್ತವೆ. ಗೊನೆಯ ಗಾತ್ರ, ಹಣ್ಣಿನ ಹೊಳಪು, ಗುಣಮಟ್ಟಕ್ಕೆ ಅನುಗುಣವಾಗಿ ವ್ಯಾಪಾರಿಗಳು ರೈತರಿಂದ ಒಪ್ಪಂದದ ಪ್ರಕಾರ ಕಟಾವು ಮಾಡುತ್ತಾರೆ.

ವರಲಕ್ಷ್ಮೀ ಹಬ್ಬದಿಂದ ತೀವ್ರ ಬೆಲೆ ಏರಿಕೆ ಕಂಡಿದ್ದ ಬಾಳೆ, ಗೌರಿ, ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮತ್ತಷ್ಟು ಬೆಲೆ ಏರಿಕೆ ಆಗಿದೆ.

ಬೆಳೆ ವಿಸ್ತರಣೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗೂ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಭಾಗದಲ್ಲಿ ಬಾಳೆ ವಿಸ್ತೀರ್ಣ ಹೆಚ್ಚಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 6825.46 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ನಾಟಿ ಮಾಡಲಾಗಿದೆ. ಆದರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಬಾಳೆ ನಾಟಿ ಮಾಡಲಾಗಿದೆ. ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಏಲಕ್ಕಿ ಬಾಳೆ ಬೆಳೆಯುತ್ತಿದ್ದು, ಅಲ್ಲಿಂದ ರೈತರು ಬಾಳೆ ಕಂದುಗಳನ್ನು ಖರೀದಿಸಿ, ಬಯಲುಸೀಮೆಯಲ್ಲಿ ನಾಟಿ ಮಾಡುತ್ತಾರೆ.

ಸರ್ಕಾರಿ ಸೌಲಭ್ಯಗಳು: ಅಂಗಾಂಶ ಬಾಳೆ, ಕಂದು ಬಾಳೆ ಹೊಸ ಪ್ರದೇಶ ವಿಸ್ತರಣೆಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸಿಗಲಿದೆ. ಅಂಗಾಂಶ ಬಾಳೆ 1 ಹೆಕ್ಟೇರ್‌ಗೆ 30,600 ರೂ. ಸಹಾಯಧನ ಪಡೆಯಬಹುದು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ, ನಾಟಿ, ನಿರ್ವಹಣೆಗೆ ಸೌಲಭ್ಯ ಸಿಗಲಿದೆ. ಜತೆಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಾಮಾನ್ಯ ವರ್ಗದ ರೈತರಿಗೆ ಶೇ.75, ಎಸ್ಸಿ-ಎಸ್ಟಿ ರೈತರಿಗೆ ಶೇ.90ರಷ್ಟು ಸಬ್ಸಿಡಿ ದೊರಕಲಿದೆ.

ಉತ್ತಮ ಬೆಲೆ: ಜೂನ್ ತಿಂಗಳಿಂದ ನವೆಂಬರ್, ಡಿಸೆಂಬರ್ ವರೆಗೆ ಏಲಕ್ಕಿ ಬಾಳೆಗೆ ಉತ್ತಮ ಬೆಲೆ ಲಭಿಸಲಿದೆ. ತೋಟದಲ್ಲಿ ನೇರವಾಗಿ 60-75 ರೂಪಾಯಿಗೆ ಕಟಾವು ಮಾಡಲಾಗುತ್ತಿದೆ. 2018ರ ನಂತರ ಏಲಕ್ಕಿ ಬಾಳೆಗೆ ಬೇಡಿಕೆ ಹೆಚ್ಚಾಗಿ, ಉತ್ತಮ ಬೆಲೆ ದೊರೆಯುತ್ತಿದೆ.- ಸಿದ್ದೇಶ್, ವಿ.ಕೆ.ಗುಡ್ಡ, ಬಾಳೆ ವ್ಯಾಪಾರಿ

ಮಿಶ್ರ ಬೆಳೆ ಪದ್ಧತಿ ರೈತರ ರಕ್ಷಕ: ಕಳೆದ ವರ್ಷ ವರುಣನ ಕೃಪೆಯಿಂದ ಕೆರೆ, ಕಟ್ಟೆ, ಹಳ್ಳಗಳು ಭರ್ತಿಯಾಗಿ, ಅಂತರ್ಜಲ ವೃದ್ಧಿಯಾಗಿ ತೋಟಗಾರಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಮಿಶ್ರ ಬೆಳೆ ಪದ್ಧತಿ ರೈತರ ರಕ್ಷಕನಿದ್ದಂತೆ. ಅಡಕೆ ಜತೆ ಬಾಳೆ ಕೃಷಿ ಮಾಡಿದ ರೈತರಿಗೆ ಸರ್ಕಾರದ ಸೌಲಭ್ಯ ಕೊಡಬೇಕು. 2016 ರಲ್ಲಿ 1 ಕೆಜಿ ಬಾಳೆಗೆ 85 ರೂ. ಬೆಲೆ ಸಿಕ್ಕಿದ್ದು ದಾಖಲೆ.-ಹನುಮಂತರಾಯಪ್ಪ, ಬಾಳೆ ಬೆಳೆಗಾರ

ಲಾಭದಾಯಕ: ಬಯಲುಸೀಮೆ ರೈತರ ಆರ್ಥಿಕ ಸದೃಢತೆಗೆ ತೋಟಗಾರಿಕೆ ಬೆಳೆಗಳು ವರದಾನವಾಗಿದ್ದು, ಬಾಳೆ ಕೃಷಿ ಮಾಡುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯ ಸಿಗಲಿವೆ. ಮಿಶ್ರ ಬೇಸಾಯ ರೈತರಿಗೆ ಹೆಚ್ಚು ಲಾಭದಾಯಕವಾಗಿದೆ.-ಲೋಕೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಹಿರಿಯೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net