ಅಭಿಮಾನ ಮೂಡಿಸಲು ಅಭಿಯಾನ

9 smg 1
ಶಿವಮೊಗ್ಗದಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನಕ್ಕೆ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಕೆ.ಎಸ್.ಈಶ್ವರಪ್ಪ, ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಕೆ.ಆರ್.ಸಿದ್ದರಾಮಣ್ಣ, ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಶಿವಕುಮಾರರ್ ಇತರಿರದ್ದರು.
Published on

ಶಿವಮೊಗ್ಗ: ನನ್ನ ಮಣ್ಣು, ನನ್ನ ದೇಶ ಪವಿತ್ರವಾದ ಅಭಿಯಾನ. ಈ ಕಾರ್ಯಕ್ರಮ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ನಡೆಯುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಶನಿವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ನೆಲ, ಜಲ, ಭಾಷೆ ಭಾವಾನಾತ್ಮಕ ಸಂಬಂಧ ಹೊಂದಿವೆ. ಈ ಮಣ್ಣಿನ ಗುಣ ನಮ್ಮ ಮಾತೃಶಕ್ತಿಯೂ ಹೌದು. ತಾಯಿ ಸ್ವರೂಪದ ಭೂಮಿಯನ್ನು ನಾವು ಪ್ರೀತಿಸಬೇಕು ಎಂದರು.
ಮಣ್ಣು ರೈತರಿಗೂ ವರದಾನವಾಗಿದ್ದು ನಮ್ಮ ಜೀವನದ ಅಂಗವೂ ಹೌದು. ಆದರೆ ಭೂಮಿ, ದೇಶ, ಮಣ್ಣಿನ ಬಗ್ಗೆ ಅಭಿಮಾನ ಕೊರತೆ ಅಲ್ಲಿ, ಇಲ್ಲಿ ಯುವಕರ ಮಧ್ಯೆ ನಾವು ಕಾಣುತ್ತಿದ್ದೇವೆ. ಈ ಹೊತ್ತಿಯಲ್ಲಿ ಮಣ್ಣಿನ ಶಕ್ತಿಯನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈ ಮಣ್ಣಿನ ಬಗ್ಗೆ ಪ್ರೀತಿ ಇರದೆ ಹೋದರೆ, ಅವಿನಾಭಾವ ಸಂಬಂಧ ಇಲ್ಲದಿದ್ದಲ್ಲಿ ಅದು ವ್ಯತಿರಿಕ್ತ ಚಿಂತನೆ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ಅದು ಉಗ್ರಗ್ರಾಮಿ ಚುಟುವಟಿಕೆಯಂತಹ ಸಮಾಜಘಾತುಕ ಕೃತ್ಯಗಳಿಗೂ ಆಸ್ಪದ ಆಗಬಹುದು. ಹಾಗಾಗಿ ಈ ಮಣ್ಣನ್ನು ಪ್ರೀತಿ ಮಾಡುವಂತಹ ವ್ಯಕ್ತಿ ಯಾವತ್ತು ಕೂಡ ದೇಶ ದ್ರೋಹಿಯಾಗಲು ಸಾಧ್ಯವಿಲ್ಲ. ಹಾಗಾಗಿ ಪ್ರಧಾನ ಮಂತ್ರಿಗಳು ದೇಶದ ಬಗ್ಗೆ ಪ್ರೀತಿ ಮೂಡಿಸಲು ನನ್ನ ಮಣ್ಣು ನನ್ನ ದೇಶ ಅಭಿಯಾನದ ಕರೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ಇಲ್ಲಿ ಕಳಶಕ್ಕೆ ಹಾಕುವ ಮಣ್ಣನ್ನು ದೆಹಲಿಗೆ ಕೊಂಡೊಯ್ದು ಒಂದು ದೊಡ್ಡ ವನ ಮಾಡಿ ಇಡೀ ದೇಶಾದ್ಯಂತ ಬಂದಂತಹ ಸಸಿಯನ್ನು ಅಲ್ಲಿ ನೆಡಲಾಗುವುದು ಎಂದು ಹೇಳಿದರು.
ಮಾಜಿ ಉಪಮುಖಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮಣ್ಣು ಎಂದರೆ ನಾವು ಆರ್ಥಿಕವಾಗಿ ಚಿಂತನೆ ಮಾಡುವ ಜನ. ವಿದೇಶದಲ್ಲೂ ಕೂಡ ಇದೇ ಚಿಂತನೆ ಇದೆ. ಆದರೆ ಭಾರತದಲ್ಲಿ ಮಣ್ಣು ಎಂದರೆ ಮಾತೃಭೂಮಿ ಎಂದು ಸ್ವೀಕಾರ ಮಾಡಲಾಗುತ್ತದೆ ಎಂದು ಹೇಳಿದರು.
ಒಂದು ಇಂಚು ಭೂಮಿಯನ್ನು ಕೂಡ ನಾವು ಪಾಕಿಸ್ತಾನ, ಚೀನಾಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಅದು ಮಣ್ಣಿನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತದೆ. ನಮ್ಮ ದೇಶದ ಮಣ್ಣಿನ ಕಣಕಣದ ಪಾವಿತ್ರೃತೆ ಈ ದೇಶದ ದೇಶಭಕ್ತರಿಗೆ ಮಾತ್ರ ಗೊತ್ತು. ಕೇವಲ ಅಧಿಕಾರ ಪಡೆಯಬೇಕು, ಅದರ ಮುಖಾಂತರ ಏನೋ ಮಾಡಬೇಕು ಎನ್ನುವ ವ್ಯಕ್ತಿಗಳಿಗೆ ಈ ಮಣ್ಣಿನ ಬಗ್ಗೆ ಬಹಳ ಗೊತ್ತಿಲ್ಲ ಎಂದು ಟೀಕಿಸಿದರು.
ನಾವು ಅನೇಕ ಸಿನಿಮಾ ಹಾಡುಗಳಲ್ಲಿ, ಕವಿತೆಗಳಲ್ಲಿ ಈ ದೇಶದ ಮಣ್ಣನ್ನು ಮುತ್ತು, ರತ್ನಗಳಿಗೆ ಹೋಲಿಸಿರುವುದನ್ನು ಕಾಣುತ್ತೇವೆ. ಹಾಗಾಗಿ ಮಣ್ಣಿನ ಬಗ್ಗೆ ಪ್ರಪಂಚದ ಭಾವನೆಯೇ ಬೇರೆ, ಭಾರತದ ಭಾವನೆಯೇ ಬೇರೆ. ನಮ್ಮ ರೈತ ಮೊದಲು ನಮಸ್ಕಾರ ಮಾಡುವುದು ಭೂಮಿ ತಾಯಿಗೆ. ಒಬ್ಬ ಪೈಲ್ವಾನ್ ಕುಸ್ತಿಗೆ ಇಳಿಯುವುದಕ್ಕಿಂತ ಮೊದಲು ಅಖಾಡಕ್ಕೆ ನಮಸ್ಕಾರ ಮಾಡುತ್ತಾನೆ. ಅಂದರೆ ಈ ಮಣ್ಣಿಗೆ ಗೌರವ ಕೊಟ್ಟಾಗ ಮಾತ್ರ ನಮಗೆ ಗೌರವ ಸಿಗುತ್ತದೆ. ನಮ್ಮ ಹೆಣ್ಣು ಮಕ್ಕಳು ಕೂಡ ಮಣ್ಣಿಗೆ ಪೂಜೆ ಮಾಡುತ್ತಾರೆ. ಹೀಗೆ ಈ ದೇಶದಲ್ಲಿ ಮಣ್ಣಿಗೆ ಬಹಳ ಪಾವಿತ್ರೃತೆ ಇದೆ. ವಿದೇಶದಿಂದ ಭಾರತಕ್ಕೆ ಬಂದ ವಿವೇಕಾನಂದರು ಮಣ್ಣನ್ನು ಮುಟ್ಟಿ ನಮಸ್ಕರಿಸುತ್ತಾರೆ. ಇಂತಹ ಮಣ್ಣಿನ ಬಗ್ಗೆ ಎಲ್ಲರಲ್ಲೂ ತಾಯಿ ಭಾವನೆ ಬೆಳೆಯಬೇಕು ಎಂದು ನರೇಂದ್ರ ಮೋದಿಯವರು ಇಂತಹ ಕಾರ್ಯಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಈ ಕಾರ್ಯಕ್ರಮದ ಬಳಿಕ ವೀರ ಯೋಧರು ಹಾಗೂ ಮಾಜಿ ಸೈನಿಕರ ಮನೆಗಳಿಂದ ಮಣ್ಣನ್ನು ಸಂಗ್ರಹಿಸಲಾಗುವುದು. ನಂತರ ಸಮಾಜಕ್ಕೆ ಜೀವ ಮುಡುಪಾಗಿಟ್ಟವರ ಮನೆಯಲ್ಲಿ, ನಂತರ ಪ್ರತಿ ಮನೆಯಿಂದಲೂ ಮಣ್ಣನ್ನು ಸಂಗ್ರಹಿಸಿ ಬೆಂಗಳೂರಿಗೆ ರವಾನಿಸಲಾಗುವುದು. ಅಲ್ಲಿಂದ ದೆಹಲಿಗೆ ಸಾಗಿಸಿ ಅಲ್ಲಿನ ಕರ್ತವ್ಯ ಪಥದ ನೂತನ ಉದ್ಯಾನದಲ್ಲಿ ಹಾಕಲಾಗುವುದು ಎಂದು ಹೇಳಿದರು.
ಇದೇ ಕಳಸದ ಮೂಲಕ ಮಣ್ಣನ್ನು ಸಂಗ್ರಹಿಸಲಾಯಿತು. ವೀರ ಯೋಧರನ್ನು ಗೌರವಿಸಲಾಯಿತು. ಶಾಸಕ ಎಸ್.ಎನ್.ಚನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮಾಜಿ ಸದಸ್ಯ ಕೆ.ಆರ್.ಸಿದ್ದರಾಮಣ್ಣ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮೇಯರ್ ಶಿವಕುಮಾರ್, ಸುರೇಖಾ ಮುರಳೀಧರ್, ಸುವರ್ಣಾ, ಜ್ಞಾನೇಶ್ವರ್, ಎಸ್.ದತ್ತಾತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net