ಕೌಶಲ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

Yuvaraja college
Published on

ಮೈಸೂರು: ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಯ ಕಡೆಗೆ ಮಾತ್ರ ಗಮನ ಹರಿಸದೆ ಉತ್ತಮ ಕೌಶಲ ಬೆಳೆಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್.ನಾಗರಾಜ ಕರೆ ನೀಡಿದರು.

ಯುವರಾಜ ಕಾಲೇಜು ಸಭಾಂಗಣದಲ್ಲಿ ಬುಧವಾರ ಕಾಲೇಜಿನ 2024-25ನೇ ಸಾಲಿನ ‘ಜ್ಞಾನವಾಹಿನಿ’ಯ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಇದು ಸ್ಪರ್ಧಾತ್ಮಕ ಜಗತ್ತು, ಸಾಕಷ್ಟು ಸ್ಪರ್ಧೆ ನಿಮಗೆ ಎದುರಾಗುತ್ತದೆ. ಶಾಲಾ ತರಗತಿಯ ಮಾದರಿಯಲ್ಲಿ ಜಗತ್ತು ಇರುವುದಿಲ್ಲ. ಹಾಗಾಗಿ ಜಗದ ಸ್ಪರ್ಧೆಗೆ ವಿದ್ಯಾರ್ಥಿಗಳು ಅಣಿಯಾಗಬೇಕು. ಕೌಶಲ ಪಡೆಯಲು ವಿದ್ಯಾರ್ಥಿಗಳು ಸತತ ಪ್ರಯತ್ನ ಪಡುವುದು ಅನಿವಾರ್ಯ ಎಂದರು.

ನಮಗೆ ಯಾವ ರೀತಿ ಸ್ಪರ್ಧೆಗಳು ಎದುರಾಗುತ್ತವೆ ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ಆ ಸ್ಪರ್ಧೆ ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ಸಾಧನೆ ತೋರಬೇಕಾದರೆ ಶಿಸ್ತು ಅತ್ಯಂತ ಅಗತ್ಯ. ಶಿಸ್ತು ಬೆಳೆಸಿಕೊಂಡರೆ ಸಾಧನೆ ನಿಮ್ಮದಾಗುತ್ತದೆ. ಯಾರು ಸಹ ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಲು ಸಾಧ್ಯವಿಲ್ಲ. ಪರಿಶ್ರಮ ದಿಂದ ಹಂತ ಹಂತವಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಎ. ಶ್ರೀಧರ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳು ಧೃಢ ವಿಶ್ವಾಶ, ನಿರಂತರ ಪರಿಶ್ರಮದಿಂದ ವಿದ್ಯಾರ್ಜನೆ ಕೈಗೊಳ್ಳಬೇಕು. ಸಮಯ ಎಂಬುದು ಅನರ್ಘ್ಯ, ಅದನ್ನು ವ್ಯರ್ಥ ಮಾಡಬೇಡಿ, ತರಗತಿಗೆ ತಪ್ಪದೆ ಹಾಜರಾಗಿ, ಗುರು, ಹಿರಿಯರನ್ನು ಗೌರವಿಸಿ ಎಂದು ಕಿವಿಮಾತು ಹೇಳಿದರು.

ಸಾಹಿತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮಲ್ಲಿ ಸಂಸ್ಕಾರ ಉಂಟುಮಾಡುತ್ತವೆ. ಶೈಕ್ಷಣಿಕ ಸಂಪರ್ಕ ಮತ್ತು ಕ್ರೀಡೆಯು ಸಾಮಾಜಿಕ ಅಭ್ಯುದಯ, ದೈಹಿಕ ಸಧೃಢತೆಗೆ ಸಹಕಾರ ನೀಡುತ್ತವೆ. ಈ ಎಲ್ಲವೂ ನಮ್ಮನ್ನು ಮಾನವರನ್ನಾಗಿ ರೂಪಿಸುತ್ತವೆ ಎಂದರು.

ಪ್ರಾಂಶುಪಾಲ ಪ್ರೊ.ಎಚ್.ಸೋಮಶೇಖರಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net