

ಚಿಕ್ಕಮಗಳೂರು: ಕೊಳೆತು ನಾರುವ ಜಾಗದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಿರುವ ಕಾರಣ ವಿಶಾಲವಾಗಿ ಹರಡಿರುವ ಗಿಡ-ಗಂಟಿಗಳ ಸಮೀಪ ಮಕ್ಕಳು ಹೋಗಬಾರದು. ಸ್ವಚ್ಚತೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಜಿಲ್ಲಾಸ್ಪತ್ರೆ ಹಿರಿಯ ವೈದ್ಯ ಡಾ. ಮುರಳಿಧರ್ ತಿಳಿಸಿದರು.
ನಗರದ ಎಸ್.ಆರ್.ನರ್ಚರ್ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳಿಗೆ ಡೆಂಘೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಳೆಗಾಲದ ಸಂದರ್ಭಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಈ ಸೊಳ್ಳೆಗಳು ರೋಗಾಣುಗಳನ್ನು ಮನುಷ್ಯ ದೇಹದಲ್ಲಿ ಬಿತ್ತುವ ಪರಿಣಾಮ ಡೆಂಘೆ, ಮಲೇರಿಯಾ ಸೇರಿದಂತೆ ಇನ್ನಿತರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು.
ಸೊಳ್ಳೆಗಳ ಕಡಿತದಿಂದ ಹೆಚ್ಚಾಗಿ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಾರೆ. ಹೀಗಾಗಿ ಶಾಲೆಯಿಂದ ತೆರಳುವ ವೇಳೆ ಅಥವಾ ಆಟೋಟದ ಸಂದರ್ಭದಲ್ಲಿ ಚರಂಡಿಗಳ ಸಮೀಪ, ಗಿಡ-ಗಂಟಿಗಳು ಹೆಚ್ಚಿರುವ ಭಾಗಕ್ಕೆ ತೆರಳದಂತೆ ನಿಗಾವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮನೆಗಳ ಅಕ್ಕಪಕ್ಕದ ಮೋರಿಗಳಲ್ಲಿ ಅಥವಾ ಕಾಂಪೌAಡ್ ಆವರಣದಲ್ಲಿ ಎಳನೀರು ಅರ್ಧಭಾಗ, ಕಾಯಿಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ಸೊಳ್ಳೆಗಳು ನಿಂತ ನೀರಿನಲ್ಲೇ ಯಥೆಚ್ಚವಾಗಿ ಮೊಟ್ಟೆಯಿಟ್ಟು ಮರಿಯಾಗಿಸಿ ಇನ್ನಷ್ಟು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೆ ರೋಗ ಹರಡುತ್ತವೆ ಎಂದು ಎಚ್ಚರಿಸಿದರು.
ಶಾಲೆಯ ಪ್ರಾಚಾರ್ಯೆ ಸುಪ್ರಿಯಾ ಮಾತನಾಡಿ, ಬಾಲ್ಯದಿಂದಲೇ ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಇತ್ತೀಚೆಗೆ ಡೆಂಘೆ ಪ್ರಕರಣಗಳು ಹೆಚ್ಚು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರ ವಹಿಸುವ ಮೂಲಕ ಆರೋಗ್ಯಪೂರ್ಣ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಬಂದಿಗಳಾದ ನಜಮುಸ್, ರಾಕೇಶ್, ಪ್ರೀತೇಶ್, ತಸ್ಮಿಯಾ ಮತ್ತಿತರರಿದ್ದರು.