

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಆ ಕಲ್ಲನ್ನು ಆರೋಪಿ 'ಕ್ಯಾಲಿಫೋರ್ನಿಯಂ' ಎಂದು ಹೇಳುತ್ತಿದ್ದ. ಈ ವಿಚಾರ ತಿಳಿದ ಪೊಲೀಸರು ಆಯುಕ್ತರು 'ಅದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು); ಅದನ್ನು ಬರಿಗೈಲಿ ಮುಟ್ಟಬೇಡಿ; ಮರಳಿನಲ್ಲಿ ಮುಚ್ಚಿ ಇಡಿ' ಎಂದು ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದರು. ಆ ಕಲ್ಲನ್ನು ಮುಟ್ಟಿದ್ದ ಪೊಲೀಸರಲ್ಲಿ ಎದೆಯಲ್ಲಿ ಢವಢವ ಶುರಶುರುವಾಯ್ತು. ಕ್ಯಾಲಿಫೋರ್ನಿಯಂ ಕುರಿತು ಗೂಗಲ್ನಲ್ಲಿ ಹುಡುಕಾಡಿ ಅದರ ಶಕ್ತಿ ಬಗ್ಗೆ ತಿಳಿದುಕೊಂಡ ಪೊಲೀಸರು ಮತ್ತಷ್ಟು ಬೆಚ್ಚಿ ಬಿದ್ದರು. "ನಾನು ಮುಟ್ಟಿದ್ದೇನೆ, ನೀನು ಮುಟ್ಟಿದ್ದೀಯಾ?.. ಮುಂದೆ ಏನಾಗುತ್ತೋ ಏನೋ..'' ಎಂಬ ಆತಂಕ ಭರಿತ ಮಾತುಗಳು ಪೊಲೀಸ್ ಸಿಬ್ಬಂದಿಯಲ್ಲಿ ಕೇಳತೊಡಗಿತು.
ಇಂತಹ ಘಟನೆ ಮಂಗಳವಾರ ಕೊಪ್ಪಳ ಮೂಲದ ಮೌನೇಶ ಶಿವಪ್ಪ ಅರ್ಕಾಚಾರಿ ಎಂಬಾತನನ್ನು ಹುಬ್ಬಳ್ಳಿಯ ಶಹರದಲ್ಲಿ ಬಂಧಿಸಿ, ಆತನ ಬಳಿಯಿದ್ದ 1039 ಗ್ರಾಂ ತೂಕದ 9 ಶೈನಿಂಗ್ ಕಲ್ಲುಗಳನ್ನು ಪೊಲೀಸರು ವಶಪಡಿಸಿಕೊಂಡ ಕೆಲವೇ ಕ್ಷಣದಲ್ಲಿ ನಡೆದಿದೆ. ಮೌನೇಶ ಶಿವಪ್ಪ ಅರ್ಕಾಚಾರಿ ಎಂಬಾತ ಹೊಳೆಯುವ ಕಲ್ಲುಗಳನ್ನು ಚೀಲದಲ್ಲಿ ತುಂಬಿಕೊಂಡು ಶಹರಗೆ ತಂದಿದ್ದ. ಇದು 'ಕ್ಯಾಲಿಫೋರ್ನಿಯಂ' ವಸ್ತು. ಇದರಲ್ಲಿ ಚಿನ್ನ ಇದೆ ಎಂದು ನಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ. ಶಹರ ಠಾಣೆ ಇನ್ಸ್ಪೆಕ್ಟರ್ ಆನಂದ ಒನಕುದ್ರೆ ಹಾಗೂ ತಂಡದವರು ಈತನನ್ನು ಬಂಧಿಸಿದ್ದರು.
ಈತನಿಂದ ವಶಪಡಿಸಿಕೊಂಡಿದ್ದ 9 ಕಲ್ಲುಗಳನ್ನು ಠಾಣೆಯ ಅಧಿಕಾರಿ, ಸಿಬ್ಬಂದಿ ಬರಿಗೈಯಲ್ಲಿ ಮುಟ್ಟಿ ತಪಾಸಣೆ ಮಾಡಿದ್ದರು. ಈ ವಿಷಯವನ್ನು ಇನ್ಸ್ಪೆಕ್ಟರ್ ಒನಕುದ್ರೆ ಅವರು ಕೂಡಲೇ ಪೊಲೀಸ್ ಆಯುಕ್ತ ಲಾಭೂರಾಮ ಅವರಿಗೆ ಕರೆ ಮಾಡಿ ತಿಳಿಸಿದ್ದರು. ವಶಪಡಿಸಿಕೊಂಡಿರುವ ವಸ್ತುವಿನ ಹೆಸರು 'ಕ್ಯಾಲಿಫೋರ್ನಿಯಂ' ಎಂದು ಆರೋಪಿ ಹೇಳುತ್ತಿದ್ದಾನೆ ಎಂದು ತಿಳಿಸಿದ್ದರು. ಕೂಡಲೇ ಎಚ್ಚೆತ್ತ ಆಯುಕ್ತರು 'ಅದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು); ಅದನ್ನು ಬರಿಗೈಲಿ ಮುಟ್ಟಬೇಡಿ; ಮರಳಿನಲ್ಲಿ ಮುಚ್ಚಿ ಇಡಿ' ಎಂದು ಸೂಚಿಸಿದ್ದರು.
ಅಲ್ಲಿಂದ ಪೊಲೀಸರಲ್ಲಿ ಆತಂಕ ಶುರುವಾಯಿತು. ಕ್ಯಾಲಿಫೋರ್ನಿಯಂ ಕುರಿತು ಗೂಗಲ್ನಲ್ಲಿ ಹುಡುಕಾಡಿ ಅದರ ಶಕ್ತಿ ಬಗ್ಗೆ ತಿಳಿದುಕೊಂಡು ಬೆಚ್ಚಿ ಬಿದ್ದದ್ದರು. 'ನಾನು ಮುಟ್ಟಿದ್ದೇನೆ, ನೀನು ಮುಟ್ಟಿದ್ದೀಯಾ?.. ಮುಂದೆ ಏನಾಗುತ್ತೋ ಏನೋ..' ಎಂಬ ಆತಂಕ ಅವರಲ್ಲಿ ಕಾಡತೊಡಗಿದ್ದವು.
ಇದೇ ವೇಳೆ ಈ ವಸ್ತುವನ್ನು ಪರೀಕ್ಷಿಸಲೆಂದು ಕಿಮ್ಸ್ನ ಲ್ಯಾಬ್ಗೆ ರವಾನಿಸಲಾಯಿತು. ಇದನ್ನು ಪರೀಕ್ಷಿಸಿದ ವೈದ್ಯರು ಇದು ಕ್ಯಾಲಿಫೋರ್ನಿಯಂ ಅಲ್ಲ; ಕೇವಲ ಹೊಳೆಯುವ ಕಲ್ಲು ಎಂದು ಖಚಿತ ಪಡಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗಲೂ ಇದು ಕ್ಯಾಲಿಫೋರ್ನಿಯಂ ಅಲ್ಲವೆಂದು ಖಾತ್ರಿಯಾಯಿತು. ಆಗ ಪೊಲೀಸರು ನಿಟ್ಟುಸಿರು ಬಿಟ್ಟರು.
1 ಗ್ರಾಂಗೆ 17 ಕೋಟಿ ರೂಪಾಯಿ!: ಕ್ಯಾಲಿಫೋರ್ನಿಯಂ ಎಂಬುದು ರೇಡಿಯೋ ಆ್ಯಕ್ಟಿವ್ ಮಟಿರಿಯಲ್ (ವಿಕಿರಣ ಸೂಸುವ ವಸ್ತು). ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹ. ಇದು ಯುರೇನಿಯಂ ನಂತರ ಅತಿ ಹೆಚ್ಚು ಪರಮಾಣು ಸಂಖ್ಯೆಯನ್ನು ಹೊಂದಿದೆ. ಈ ಕಾರಣಗಳಿಗಾಗಿ ಮಾರುಕಟ್ಟೆಯ ಮೌಲ್ಯ ಹೆಚ್ಚಾಗಿದೆ. ಇದನ್ನು ಬರಿಗೈಲಿ ಮುಟ್ಟಿದರೆ ಕ್ಯಾನ್ಸರ್ನಂಥ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಹೀನತೆ ಆಗುವ ಸಾಧ್ಯತೆ ಇದೆ. 1950ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಲಾರೆನ್ಸ್ ರ್ಬಕೆಲಿ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಇದನ್ನು ಸಂಶೋಧಿಸಲಾಗಿತ್ತು. ಹಾಗಾಗಿ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ನಾಮಕರಣ ಮಾಡಲಾಗಿದೆ. 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂ. ಎನ್ನುತ್ತವೆ ಮೂಲಗಳು.
ಕ್ವಾರಿಯಲ್ಲಿ ಸಿಕ್ಕಿದ್ದವು: ಕೊಪ್ಪಳದ ಕ್ವಾರಿಯೊಂದರಲ್ಲಿ ಈ ಹೊಳೆಯುವ ಕಲ್ಲುಗಳು ಸಿಕ್ಕಿದ್ದವು ಎಂದು ಕೊನೆಗೂ ಮೌನೇಶ ಒಪ್ಪಿಕೊಂಡಿದ್ದಾನೆ. ಆದರೆ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ಯಾಕೆ ಹೇಳಿದ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಶಹರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೊಳೆಯುವ ಕಲ್ಲನ್ನು ಕ್ಯಾಲಿಫೋರ್ನಿಯಂ ಎಂದು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಆರೋಪಿಯು ಇದು ಕ್ಯಾಲಿಫೋರ್ನಿಯಂ ಎಂದಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ತಜ್ಞರ ತಪಾಸಣೆ ಬಳಿಕ ಕ್ಯಾಲಿಫೋರ್ನಿಯಂ ಅಲ್ಲ ಎಂದಾಗ ಸಮಾಧಾನವಾಯಿತು.
| ಲಾಭೂರಾಮ ಪೊಲೀಸ್ ಆಯುಕ್ತ