ತಿ.ನರಸೀಪುರ : ಮುಖಗವುಸು ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಜನನಿಬಿಡ ವೃತ್ತದಲ್ಲೇ ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ.
ಪಟ್ಟಣದ ವೈನ್ಸ್ ಸ್ಟೋರ್ ಮಾಲೀಕ ಆಲಗೂಡು ಸಿದ್ದಪ್ಪ ಎಂಬುವರ ಪುತ್ರ ದಿನಕರ್ ನಾಯಕ(32) ಗಾಯಾಳು. ಅಪರಿಚಿತ ವ್ಯಕ್ತಿಯ ಚಾಕು ಇರಿತದಿಂದ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದಲ್ಲಿ ಜನಸಂದಣಿ ಇರುವ ವಿಜಯ ಭಗವಾನ್ ಚಿತ್ರಮಂದಿರ ವೃತ್ತದಲ್ಲಿ ಬುಧವಾರ ಸಂಜೆ ದಿನಕರ್ ನಾಯಕ ತನ್ನ ಸ್ಕೂಟರ್ ಮೇಲೆ ಕುಳಿತಿದ್ದ ವೇಳೆ ಮುಖಕ್ಕೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೊಬ್ಬ ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಚಾಕು
ಇರಿತದಿಂದ ಅಸ್ವಸ್ಥನಾದ ದಿನಕರ್‌ನನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜನನಿಬಿಡ ರಸ್ತೆಯಲ್ಲಿಯೇ ಇಂತಹ ದುರಂತ ಘಟನೆ ನಡೆದಿರುವುದರಿಂದ ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ. ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.