‘ಪಾರ್ಕಿಂಗ್’ ಇಲ್ಲದ ಬಸ್ ನಿಲ್ದಾಣ

11-kgl-1
Published on

ಕೊಳ್ಳೇಗಾಲ ಕೊಳ್ಳೇಗಾಲದ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಯಾಗಿ ವರ್ಷ ಸಮೀಪಿಸುತ್ತಿದ್ದರೂ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ದ್ವಿಚಕ್ರ ವಾಹನ ಸವಾರರ ಗೋಳು ಹೇಳತೀರದಾಗಿದೆ.


ಹೇಳುವುದಕ್ಕೆ ಇದು ಹೈಟೆಕ್ ಬಸ್ ನಿಲ್ದಾಣವಷ್ಟೆ. ಇರುವ ಪಾರ್ಕಿಂಗ್ ವ್ಯವಸ್ಥೆಗೆ ಟೆಂಡರ್ ಕರೆದು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ. ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಪಟ್ಟಣದ ಬಸ್ ನಿಲ್ದಾಣ, 2022ರ ಮಾ.20ರಲ್ಲಿ ಉದ್ಘಾಟನೆಗೊಂಡಿತು. ನಗರಸಭೆ ಹಾಗೂ ಕೆಎಸ್‌ಆರ್‌ಟಿಸಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡರೂ ಕೊಳ್ಳೇಗಾಲ ನಗರಸಭೆಗೆ ನಿಲ್ದಾಣ ಸೇರಿದೆ. ನಿಲ್ದಾಣ ತಳಮಹಡಿ ಸೇರಿದಂತೆ 4 ಅಂತಸ್ತುಗಳ ಸುಸಜ್ಜಿತ ಕಟ್ಟಡ ಹೊಂದಿದೆ.


ಇಕ್ಕಟ್ಟಿನ ವಾತಾವರಣ: ನೆಲಮಹಡಿಯಲ್ಲಿ ಬಸ್ ನಿಲುಗಡೆ, ಆಸನಗಳ ವ್ಯವಸ್ಥೆ, ಹೋಟೆಲ್, ಅಂಗಡಿ ಮಳಿಗೆಗಳು ಸೇರಿದಂತೆ ಇನ್ನಿತರ ಸೌಲಭ್ಯವಿದೆ. ಅದರಂತೆ ಕೆಳಮಹಡಿಯಲ್ಲಿ ಪ್ರಯಾಣಿಕರ ವಾಹನಗಳ ಪಾಕಿರ್ಂಗ್‌ಗಾಗಿ ವಿಶಾಲವಾದ ಸ್ಥಳಾಕಾಶ ಇದೆ. ಒಡಂಬಡಿಕೆಯೊಂದಿಗೆ ಸದ್ಯ ನಿಲ್ದಾಣದಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಒಂದೆಡೆ ಕಾರ್ಯ ನಿರ್ವಹಿಸುವುದರಿಂದ ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ. ಸದಾ ಪ್ರಯಾಣಿಕರಿಂದ ನಿಲ್ದಾಣ ಗಿಜುಗುಡುತ್ತಿರುತ್ತದೆ.


ಕಟ್ಟಡದ ಕೆಳ ಮಹಡಿಯಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿದ್ದರೂ ಇನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಬಸ್ ನಿಲುಗಡೆ ಆವರಣದ ಕಿರಿದಾದ ಜಾಗದಲ್ಲೇ ದ್ವಿಚಕ್ರ ವಾಹನಗಳ ನಿಲುಗಡೆ ಮಾಡುವ ಸ್ಥಿತಿ ಎದುರಾಗಿದೆ. ಇದರಿಂದ ಬಸ್‌ಗಳ ಸುಗಮ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ.
ಸಾರಿಗೆ ನಿಗಮದಿಂದ ಈಗಾಗಲೇ ಎರಡು ಬಾರಿ ಪಾಕಿರ್ಂಗ್‌ಗೆ ಟೆಂಡರ್ ಕರೆಯಲಾಗಿತ್ತು. ಮೊದಲ ಬಾರಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದರಾದರೂ ಮೊತ್ತ ಹೆಚ್ಚು ಎಂಬ ಕಾರಣ ನೀಡಿ ಗುತ್ತಿಗೆದಾರರು ಹಿಂದೆ ಸರಿದರು. ಎರಡನೇ ಬಾರಿ ಕರೆದ ಟೆಂಡರ್‌ನಲ್ಲಿ ಯಾರು ಕೂಡ ಭಾಗವಹಿಸಲಿಲ್ಲ. ಇದೀಗ ಮೂರನೇ ಬಾರಿಗೆ ಡಿ.1ರಿಂದ ಡಿ.25ರವರೆಗೆ ಮತ್ತೆ ಟೆಂಟರ್‌ಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಜಿಲ್ಲಾ ಜೂನಿಯರ್ ಅಸಿಸ್ಟೆಂಟ್ ಪಾಲಾಕ್ಷ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದು, ಈ ಬಾರಿಯು ಟೆಂಡರ್ ಪ್ರಕ್ರಿಯೆ ನಡೆಯದೇ ಇದ್ದರೆ ಪ್ರಯಾಣಿಕರ ಈ ಗೋಳು ಮುಂದುವರಿಯಲಿದೆ.


ಆತಂಕದಲ್ಲೇ ಪ್ರಯಾಣ: ಇಲ್ಲಿಂದ ಬೆಂಗಳೂರು, ಮೈಸೂರು, ಚಾಮರಾಜನಗರ ಹಾಗೂ ಮಲೆ ಮಹದೇಶ್ವರಬೆಟ್ಟ ಇನ್ನಿತರ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ತಮ್ಮ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲು ಪಾಕಿರ್ಂಗ್ ವ್ಯವಸ್ಥೆ ಇಲ್ಲದ ಕಾರಣ ನಿಲ್ದಾಣದ ಸದ್ಯ ದ್ವಾರಗಳ ಬದಿಯಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ನಿತ್ಯ ಇಲ್ಲಿಂದ ಪ್ರಯಾಣ ಬೆಳೆಸುವ ಕೆಲಪ್ರಯಾಣಿಕರು ತಮ್ಮ ವಾಹನವನ್ನು ಪಟ್ಟಣದ ಹೋಟೆಲ್, ವಸತಿ ಗೃಹ (ಲಾಡ್ಜ್), ಸರ್ಕಾರಿ ಕಚೇರಿ ಹಾಗೂ ಪರಿಚಯಸ್ಥರ ಅಂಗಡಿಗಳ ಮುಂದೆ ನಿಲ್ಲಿಸಿ ಹೋಗುವುದು ಅನಿವಾರ್ಯವಾಗಿದೆ. ವಾಹನಗಳನ್ನು ಅಲ್ಲಿಇಲ್ಲಿ ನಿಲ್ಲಿಸಿ ಹೋಗುವ ಪ್ರಯಾಣಿಕರು ಆತಂಕದಲ್ಲೇ ಹೋಗಿ ಬರಬೇಕಿದೆ. ಯಾವುದೇ ಭದ್ರತೆ ಇಲ್ಲದ ಕಾರಣ ಹೋದ ಕಡೆ ನೆಮ್ಮದಿಯಾಗಿ ತಂಗುವ ಆಗಿಲ್ಲ. ಎಷ್ಟೋ ಸರಿ ರಾತ್ರಿ ಆದರೂ ಬಂದು ತಮ್ಮ ದ್ವಿಚಕ್ರವಾಹನ ತೆಗೆದುಕೊಂಡು ಹೋಗುವ ಪರಿಸ್ಥಿತಿ ಸಾಮಾನ್ಯವಾಗಿದೆ.


ಪ್ರಯಾಣಿಕರು ಅಳಲು: ಪರಿಸ್ಥಿತಿ ಹೀಗಿದ್ದರೂ ಬಸ್ ನಿಲ್ದಾಣದ ಕೆಳ ಅಂತಸ್ತಿನಲ್ಲಿರುವ ಪಾಕಿರ್ಂಗ್ ಸ್ಥಳವನ್ನು ಸಂಬಂಧಪಟ್ಟ ನಗರಸಭೆಗಾಗಲಿ ಹಾಗೂ ಕೆಎಸ್‌ಆರ್‌ಟಿಸಿಗಾಗಲಿ ಸಾರ್ವಜನಿಕರ ಬಳಕೆಗೆ ದೊರಕಿಸಿಕೊಡುತ್ತಿಲ್ಲ. ಇದ್ದರಿಂದಾಗಿ 9 ತಿಂಗಳಿನಿಂದ ಪ್ರಯಾಣಿಕರು ತಮ್ಮ ದ್ವಿಚಕ್ರ ವಾಹಗಳಿಗೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆ ಇಲ್ಲದೆ ಆಂತಕಪಡುವಂತಾಗಿದೆ.

ಪೊಲೀಸರಿಂದ ದಂಡ: ಭಾನುವಾರ ಪಟ್ಟಣ ಠಾಣೆ ಪೊಲೀಸರು ಬಸ್ ನಿಲ್ದಾಣದ ಎರಡು ದ್ವಾರಗಳ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಠಾಣೆಗೆ ತಂದು ದಂಡ ವಿಧಿಸಿ ಬಿಡುಗಡೆ ಮಾಡಿದ್ದಾರೆ. ಇದ್ದರಿಂದ ಮತಷ್ಟೂ ಕಂಗಾಲಾಗಿರುವ ದ್ವಿಚಕ್ರ ವಾಹನದ ಪ್ರಯಾಣಿಕರು ಅಧಿಕಾರಿಗಳ ಈ ಧೋರಣೆಗೆ ಇಡಿಶಾಪ ಹಾಕುತ್ತಿದ್ದಾರೆ. ಪೊಲೀಸರು ನಿಲ್ದಾಣದ ಒಳ ಹಾಗೂ ಹೊರ ಪ್ರವೇಶಕ್ಕೆ ಅಡ್ಡಿಪಡಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ತೆರವುಗೊಳಿಸಿ, ತಮ್ಮ ಕೆಲಸ ಮಾಡಿದ್ದಾರೆ. ಆದರೆ ಪಾಕಿರ್ಂಗ್ ವ್ಯವಸ್ಥೆಗೆ ಟೆಂಡರ್ ಕರೆದು ದ್ವಿಚಕ್ರ ವಾಹನಗಳ ನಿಲುಗಡೆಗೆ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸುವ ಕಾರ್ಯ ಕೆಎಸ್‌ಆರ್‌ಟಿಸಿ ಹಾಗೂ ನಗರಸಭೆ ಅಧಿಕಾರಿಗಳು ಮಾಡಬೇಕಿದೆ.


ನಿಲ್ದಾಣದ ಆಗಮನ ದ್ವಾರ ಹಾಗೂ ನಿರ್ಗಮನ ದ್ವಾರಗಳ ಎರಡು ಬದಿಯಲ್ಲೂ ದ್ವಿಚಕ್ರ ವಾಹನಗಳ ನಿಲುಗಡೆ ಬಸ್‌ಗಳ ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ನಿರಂತರ ಅಡ್ಡಿಪಡಿಸುತ್ತಿದೆ. ಅದರಲ್ಲೂ ಒಳಪ್ರವೇಶ ದ್ವಾರದಲ್ಲಿ ಸಾರ್ವಜನಿಕರು ಅಲ್ಲೇ ಗುಂಪು ಕಟ್ಟಿ ನಿಲ್ಲುವುದ್ದರಿಂದ ರಭಸವಾಗಿ ಬರುವ ಬಸ್‌ಗಳು ಯಾವ ವೇಳೆ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯುವುದೋ ಎಂಬಂತಾಗಿದೆ. ಈ ಕುರಿತು ಇತ್ತೀಚೆಗೆ ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಸಹ ಪ್ರಕಟಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net