ಕುಸಿಯುವ ಹಂತ ತಲುಪಿದ ಬಸ್ ಶೆಲ್ಟರ್

ಗುಂಡ್ಲುಪೇಟೆ ತಾಲೂಕಿನ ಕೆಲಸೂರು ಗೇಟ್‌ನಲ್ಲಿರುವ ಶಿಥಿಲಗೊಂಡಿರುವ ಬಸ್ ಶೆಲ್ಟರ್‌ನಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿರುವುದು.
ಗುಂಡ್ಲುಪೇಟೆ ತಾಲೂಕಿನ ಕೆಲಸೂರು ಗೇಟ್‌ನಲ್ಲಿರುವ ಶಿಥಿಲಗೊಂಡಿರುವ ಬಸ್ ಶೆಲ್ಟರ್‌ನಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ಕೆಲಸೂರು ಗೇಟ್‌ನಲ್ಲಿರುವ ಬಸ್ ಶೆಲ್ಟರ್ ಸಂಪೂರ್ಣವಾಗಿ ಶಿಥಿಲಗೊಂಡು ಕುಸಿಯುವ ಹಂತದಲ್ಲಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಶಿಥಿಲವಾಗಿರುವ ಶೆಲ್ಟರ್‌ನಲ್ಲಿಯೇ ಬಸ್‌ಗಾಗಿ ಕಾಯುವಂತಾಗಿದ್ದು ಅಪಾಯ ಸಂಭವಿಸುವ ಮುನ್ನ ರಿಪೇರಿ ಮಾಡಿಸುವಂತೆ ಒತ್ತಾಯಿಸಿದ್ದಾರೆ.

ಶೆಲ್ಟರ್ ಅನ್ನು ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕೆಲಸೂರು, ಕಗ್ಗಳದಹುಂಡಿ, ಹಳೇಹುಂಡಿ ಸೇರಿದಂತೆ ನಾಲ್ಕಾರು ಗ್ರಾಮಗಳ ಜನರು ಬಸ್ ಹತ್ತಲು ಇಲ್ಲಿ ಬಂದು ನಿಲ್ಲುತ್ತಾರೆ. ಕೆಲಸೂರು ಗ್ರಾಮ ಪಂಚಾಯಿತಿ ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಶೆಲ್ಟರ್‌ನ ಛಾವಣಿ ಹಾಗೂ ಗೋಡೆಗಳಿಗೆ ಹಾಕಿದ್ದ ಸಿಮೆಂಟ್ ಹಾಗೂ ಇಟ್ಟಿಗೆ ಕಿತ್ತು ಬರುತ್ತಿವೆ. ಸುತ್ತಲೂ ಗಿಡಗಂಟಿಗಳು ಬೆಳೆದು ಹಾವು-ಚೇಳುಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ. ನೆಲಕ್ಕೆ ಹಾಕಿದ್ದ ಸಿಮೆಂಟ್‌ನಲ್ಲಿ ಭಾರಿ ಗುಂಡಿಗಳುಂಟಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಕಳೆದ ವರ್ಷ ಕಾಡಿದ ಬಿರುಬಿಸಿಲು ಹಾಗೂ ಇತ್ತೀಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಪಾರಾಗಲು ಸಾರ್ವಜನಿಕರು, ಬಸ್‌ಗಳಿಗೆ ಕಾಯುವ ಪ್ರಯಾಣಿಕರು, ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಹಾಗೂ ದ್ವಿಚಕ್ರ ವಾಹನಗಳವರು ಅನಿವಾರ್ಯವಾಗಿ ಇದೇ ಶೆಲ್ಟರ್‌ನಲ್ಲಿಯೇ ಆಶ್ರಯ ಪಡೆಯುವಂತಾಗಿದೆ.

ನಿಲ್ಲದ ಬಸ್‌ಗಳು: ಪಟ್ಟಣದಿಂದ ತೆರಕಣಾಂಬಿಗೆ ಹೋಗುವ ಸಾರಿಗೆ ಬಸ್‌ಗಳು ಹಿಂದಿನ ನಿಲ್ದಾಣಗಳಲ್ಲಿಯೇ ಭರ್ತಿಯಾಗುವುದರಿಂದ ಬಹುತೇಕ ಬಸ್‌ಗಳು ಇಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮಳೆ ಮತ್ತು ಬಿಸಿಲಿನಿಂದ ಪಾರಾಗಲು ಶೆಲ್ಟರ್ ಅನ್ನು ಅವಲಂಬಿಸುವಂತಾಗಿದೆ. ಮೊದಲೇ ಶಿಥಿಲವಾಗಿ ಬೀಳುವ ಹಂತದಲ್ಲಿರುವ ಕಟ್ಟಡ ಅಕಸ್ಮಾತ್ ಕುಸಿದರೆ ಭಾರಿ ಅನಾಹುತ ಸಂಭವಿಸಲಿದೆ. ಆದ್ದರಿಂದ ಸಂಬಂಧಪಟ್ಟವರು ಇದನ್ನು ಕೆಡವಿ ಹೊಸದಾಗಿ ಶೆಲ್ಟರ್ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುಮಾರು 40 ವರ್ಷಗಳ ಹಿಂದಿನ ಬಸ್ ಶೆಲ್ಟರ್ ಅನ್ನು ರಿಪೇರಿ ಮಾಡಿಸುವಷ್ಟು ಅನುದಾನ ಪಂಚಾಯಿತಿಯಲ್ಲಿ ಇಲ್ಲ. ಆದ್ದರಿಂದ ಶಿಥಿಲವಾದ ಕಟ್ಟಡ ಬೀಳುವ ಮೊದಲೇ ಅದನ್ನು ಕೆಡವಿಹಾಕಲು ಕ್ರಮಕೈಗೊಳ್ಳಲಾಗುವುದು.
ರವಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೆಲಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net