ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಕೆನ್ನೆಗೆ ಮುತ್ತು ಕೊಟ್ಟವ ಜೈಲಿಗೆ!

jail pic
Published on

ಬೆಂಗಳೂರು: ವಿಜಯದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಗೀತಾ-ಗೋವಿಂದಂ ಸಿನಿಮಾ ಮಾದರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಮುತ್ತು ಕೊಟ್ಟ ಆರೋಪಿ ಪೊಲೀಸರ ಅತಿಥಿ ಆಗಿದ್ದಾನೆ.

ಬಳ್ಳಾರಿ ಮೂಲದ ಮಧುಸೂದನ್ ರೆಡ್ಡಿ (25) ಬಂಧಿತ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ರೆಡ್ಡಿ, ವಿಜಯನಗರದಲ್ಲಿ ನೆಲೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಷ್ಠಿತ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ವಿದ್ಯಾರ್ಥಿನಿಯೊಬ್ಬಳು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಹೋಗಿದ್ದರು. ಸೆ.12ರ ರಾತ್ರಿ ಬಳ್ಳಾರಿಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಪರಿಚಿತ ಯುವಕ ಪಕ್ಕದಲ್ಲೇ ಕುಳಿತು ಪ್ರಯಾಣ ಬೆಳೆಸಿದ್ದ. ತಲೆಕೆಡಿಸಿಕೊಳ್ಳದ ಯುವತಿ ನಿದ್ದೆಗೆ ಜಾರಿದ್ದಳು. ಸೆ.13ರ ಬೆಳಗಿನ ಜಾವ ಟಿ. ದಾಸರಹಳ್ಳಿ ಬಳಿ ಬಸ್ ಬಂದಾಗ ಮಲಗಿದ್ದ ಯುವತಿ ಕೆನ್ನೆಗೆ ಮುತ್ತು ಕೊಟ್ಟು ಬಸ್‌ನಿಂದ ಯುವಕ ಪರಾರಿಯಾಗಿದ್ದ.

ನೊಂದ ಯುವತಿ, ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು, ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಸ್‌ಗೆ ಯಾರೆಲ್ಲ ಹತ್ತಿದ್ದಾರೆ ಎಂಬುದರ ಬಗ್ಗೆ ಸಿಸಿ ಕ್ಯಾಮರಾ ಮತ್ತು ಬಸ್ ಟಿಕೆಟ್ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಅದನ್ನು ಯುವತಿ ಸಹ ಗುರುತು ಹಿಡಿದ್ದರು. ಈ ಆಧಾರದ ಮೇಲೆ ಬೆನ್ನತ್ತಿದ್ದಾಗ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net