ದಾವಣಗೆರೆಯಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್​ ಪಲ್ಟಿ: ಪವಾಡ ಸದೃಶ್ಯ ತಪ್ಪಿತು ಭಾರಿ ದುರಂತ

New Project (30)
Published on

ದಾವಣಗೆರೆ: ಚಾಲಕ ನಿಯಂತ್ರಣ ತಪ್ಪಿದ ಖಾಸಗಿ ಬಸ್​ವೊಂದು ರಸ್ತೆ ಬದಿ ಟ್ರಾನ್ಸ್‌ಫಾರ್ಮರ್‌ ಇದ್ದ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್​ ಬಸ್​ನಲ್ಲಿದ್ದ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂತಹ ಘಟನೆ ದಾವಣಗೆರೆ ನಗರದ ಎಲೆಬೇತೂರು ಬಳಿ ಬುಧವಾರ ಸಂಭವಿಸಿದೆ. ದಾವಣಗೆರೆಯಿಂದ ಎಲೆಬೇತೂರು ಮಾರ್ಗವಾಗಿ ಜಗಳೂರು ಕಡೆಗೆ ವಿನಾಯಕ ಹೆಸರಿನ ಖಾಸಗಿ ಬಸ್ ತೆರಳುತ್ತಿತ್ತು. ಈ ಬಸ್​ನಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು. ಎಲೆಬೇತೂರು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆ ಬದಿಯ ವಿದ್ಯುತ್​ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಅಪಘಾತ ಸಂಭವಿಸಿದ ವೇಳೆ ವಿದ್ಯುತ್ ಪೂರೈಕೆ ಇರಲಿಲ್ಲ. ಹಾಗಾಗಿ ಪವಾಡ ಸದೃಶ ಭಾರೀ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಬಸ್​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net