ಸುತ್ತೂರು ಮಠಕ್ಕೆ ಯಡಿಯೂರಪ್ಪ ಭೇಟಿ: ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ

bsy
Published on

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶುಕ್ರವಾರ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು. ಯಡಿಯೂರಪ್ಪಗೆ ಶ್ರೀಮಠದಿಂದ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಬಳಿಕ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಯಡಿಯೂರಪ್ಪ, ಮಠದಲ್ಲಿ ಉಪಹಾರ ಸೇವಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ. ವಿಜಯೇಂದ್ರ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದಾರೆ. ಅವರು ಎಲ್ಲಿಂದ ಸ್ಪರ್ಧೆ ಮಾಡಬೇಕು? ಅಂತ ಹೈಕಮಾಂಡ್ ನಾಯಕರೇ ತೀರ್ಮಾನಿಸುತ್ತಾರೆ ಎಂದರು.

ಮೋದಿ ಅವರ ದೂರದೃಷ್ಟಿಯಿಂದ ಪ್ರಪಂಚವೇ ಅಚ್ಚರಿ ಪಡುವಂತೆ ಭಾರತ ದೇಶ ಮುನ್ನಡೆಯುತ್ತಿದೆ. ಮೋದಿ ಅವರು ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಬೊಮ್ಮಾಯಿ ಅವರು ಕೂಡ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ದೇಗುಲ ತೆರವು ಕಾರ್ಯ ಸರಿಯಲ್ಲ. ಯಾವುದೇ ಕಾರಣಕ್ಕೆ ತೆರವುಗೊಳಿಸಬಾರದು ಎಂದು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕ್ರಮವಹಿಸಲಿದ್ದಾರೆ ಎಂದರು. ಅಧಿವೇಶನ ಮುಗಿದ ಮೇಲೆ ಪಕ್ಷ ಸಂಘಟನೆ ದೃಷ್ಟಿಯಿಂದ ನಾವು ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net