ಜಿಹಾದಿ ಶಕ್ತಿಗಳ ಕುಕೃತ್ಯ

vhp pm
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಜಿಹಾದಿ ಶಕ್ತಿಗಳು ದೌರ್ಜನ್ಯ ನಡೆಸಿವೆ. ಅಲ್ಲಿನ ಹಿಂದುಗಳ ರಕ್ಷಣೆಗೆ ಭಾರತ ಸರ್ಕಾರ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್​ನ ಕರ್ನಾಟಕ ಉತ್ತರ ಉಪಾಧ್ಯಕ್ಷ ಕೆ. ಗೋವರ್ಧನರಾವ್ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸಮಯದಲ್ಲಿ ಜಾತಿ, ಮತ, ಧರ್ಮ ನೋಡದೇ ನೆರವು ನೀಡಿದ್ದ ಇಸ್ಕಾನ್ ದೇವಸ್ಥಾನದ ಮೇಲೆ ಜಿಹಾದಿ ಶಕ್ತಿಗಳು ದಾಳಿ ನಡೆಸಿವೆ. ಹಿಂದುಗಳ ಧಾರ್ವಿುಕ ಸ್ಥಳಗಳು, ವ್ಯಾಪಾರ ಸಂಸ್ಥೆಗಳು, ಮನೆಗಳಿಗೆ ಅಪಾರ ಹಾನಿಯುಂಟು ಮಾಡಿದ್ದಾರೆ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿವೆ. ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಗಡಿಯಾಚೆಯಿಂದ ಜಿಹಾದಿಗಳು ಭಾರತದೊಳಗೆ ನುಸುಳಲು ಪ್ರಯತ್ನ ಮಾಡಬಹುದು. ಆದ್ದರಿಂದ, ನಮ್ಮ ಭದ್ರತಾ ಪಡೆಗಳು ಗಡಿಯಲ್ಲಿ ಜಾಗರೂಕರಾಗಿರಬೇಕು. ದೇಶದ ಗಡಿ ಭಾಗದಲ್ಲಿ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸಬೇಕಿದೆ. ಬಾಂಗ್ಲಾದಲ್ಲಿ ಕಾಲಕಾಲಕ್ಕೆ ಸಂಭವಿಸುವ ಇಂತಹ ಗಲಭೆಗಳ ಪರಿಣಾಮವಾಗಿ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿದ್ದ ಶೇ.32ರಷ್ಟು ಹಿಂದೂಗಳ ಸಂಖ್ಯೆ ಈಗ ಶೇ.8ಕ್ಕೆ ಕುಸಿದಿದೆ ಎಂದರು.

ಮೀಸಲಾತಿ ನೆಪದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಬಾಂಗ್ಲಾ ಪ್ರಧಾನಿ ರಾಜೀನಾಮೆ ಕೊಟ್ಟ ಮೇಲೂ ನಿಲ್ಲುತ್ತಿಲ್ಲ. ಹಿಂದುಗಳ ಮೇಲೆ ದೌರ್ಜನ್ಯ ನಡೆಸಲು ಜಿಹಾದಿ ಶಕ್ತಿಗಳು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವುದಾದರೆ ಇವೆಲ್ಲ ಪೂರ್ವ ನಿಯೋಜಿತ ಎಂಬುದು ಸಾಬೀತಾಗುತ್ತದೆ.ಎಂದು ಎಚ್ಚರಿಸಿದರು.

ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ, ನಗರ ಕಾರ್ಯದರ್ಶಿ ರಘು ಯಲ್ಲಕ್ಕನವರ, ಸಚಿನ ಪಾಟೀಲ, ಚೇತನರಾವ್ ಹಾಗೂ ಸುಭಾಷ ಡಂಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net