ಕಾಲಕಾಲೇಶ್ವರ ಬೆಟ್ಟದಲ್ಲಿ ತುಂಡಾದ ಗಾಳಿಯಂತ್ರದ ರೆಕ್ಕೆ

22 GJD 1
Published on

ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಗ್ರಾಮದ ಗುಡ್ಡದ ಮೇಲೆ ಅಳವಡಿಸಿರುವ ಪವನ ವಿದ್ಯುತ್ ಕಂಪನಿಯ ಗಾಳಿಯಂತ್ರದ ರೆಕ್ಕೆಗಳು ಗಾಳಿಯ ರಭಸಕ್ಕೆ ಕಳಚಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಜೂರು, ಕುಂಟೋಜಿ ಗ್ರಾಪಂ ಹಾಗೂ ಉಣಚಗೇರಿ ವ್ಯಾಪ್ತಿಯಲ್ಲಿರುವ ಈ ಗುಡ್ಡದ ಮೇಲೆ ಖಾಸಗಿ ಕಂಪನಿ 91 ಎಕರೆ ಸರ್ಕಾರಿ ಜಮೀನು ಗುತ್ತಿಗೆ ಪಡೆದು 50ಕ್ಕೂ ಹೆಚ್ಚು ಪವನ ವಿದ್ಯುತ್ ಉತ್ಪಾದನಾ ಯಂತ್ರಗಳನ್ನು ಅಳವಡಿಸಿದೆ. ಆರಾಧ್ಯದೈವ ಕಾಲಕಾಲೇಶ್ವರ ನೆಲೆಸಿರುವ ಬೆಟ್ಟದ ಎದುರಿಗಿರುವ ರುದ್ರನಪಾದದ ಗುಡ್ಡದ ಮೇಲೆ ಅಳವಡಿಸಿರುವ ಗಾಳಿಯಂತ್ರದ ರೆಕ್ಕೆಗಳು ಗಾಳಿಯ ರಭಸಕ್ಕೆ ವೇಗವಾಗಿ ತಿರುಗಲು ಆರಂಭಿಸಿದೆ. ಗಾಳಿಯಂತ್ರ ನಿಯಂತ್ರಣ ತಪ್ಪಿ ಕೆಲವೇ ನಿಮಿಷಗಳಲ್ಲಿ ಒಂದು ರೆಕ್ಕೆ ಜತೆಗೆ ಅದಕ್ಕೆ ಅಳವಡಿಸಿದ ಉಪಕರಣಗಳು ತುಂಡು ತುಂಡಾಗಿ ನೆಲಕ್ಕೆ ಬಿದ್ದಿವೆ. ಗುಡ್ಡದ ಮೇಲೆ ಈ ಅವಘಡ ಸಂಭವಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಗಾಳಿ ಯಂತ್ರದ ಅಬ್ಬರ ಸಮೀಪದ ಹೊಲಗಳಲ್ಲಿ ಇದ್ದವರಿಗೂ ಕೇಳಿದೆ. ಇದರಿಂದ ಗಾಬರಿಗೊಂಡ ಅನೇಕರು ಗಾಳಿಯಂತ್ರ ಜೋರು ಸದ್ದುಮಾಡುವುದನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಸಮೀಪದ ಪ್ರದೇಶಗಳಲ್ಲಿ ನೆಲೆಸಿದ್ದ ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದವರೂ ಈ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net