

ವಿಜಯವಾಣಿ ಸುದ್ದಿಜಾಲ ಕುಷ್ಟಗಿ
ಹೆರಿಗೆ(ಸಿಸೇರಿಯನ್) ವೇಳೆ ಶಿಶುವಿನ ಕಾಲು ಮುರಿದ ಹಿನ್ನೆಲೆ ಶಿಶುವಿನ ಪಾಲಕರು ಹಾಗೂ ಕರ್ನಾಟಕ ಭೀಮ ಸೇನಾ ಸಮಿತಿ ಕಾರ್ಯಕರ್ತರು ಪಟ್ಟಣದ ತಾಲೂಕು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಚಂದ್ರಕಲಾ ಅವರನ್ನು ತರಾಟೆಗೆ ತಗೆದುಕೊಂಡಿದ್ದಲ್ಲದೆ ವೈದ್ಯೆ ವಿರುದ್ಧ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಮೇ 9ರಂದು ತಾಲೂಕಿನ ಕೆ.ಬೋದೂರು ತಾಂಡಾದ ಶಿಲ್ಪಾ ರಾಠೋಡ್ ಎನ್ನುವವರ ಹೆರಿಗೆಯಾಗಿತ್ತು. ಶಿಶುವಿನ ಕಾಲು ಮುರಿಯಲು ವೈದ್ಯೆಯ ನಿರ್ಲಕ್ಷ್ಯ ಕಾರಣ. ಇಂತಹ ಪ್ರಕರಣಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಬೇಕೆಂಬ ನಿಯಮ ಇದ್ದರೂ ಇಳಕಲ್‌ನ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಯಾವುದಕ್ಕೂ ಕ್ಯಾರೇ ಎನ್ನದೆ ತಾವು ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ವೈದ್ಯೆ ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ, ವೈದ್ಯೆಯ ವಿಚಾರಣೆ ನಡೆಸಿದಾಗ, ಘಟನೆ ಆಕಸ್ಮಿಕ ನಡೆದಿದೆ. ನನ್ನಿಂದ ತಪ್ಪಾಗಿದ್ದರೆ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಸಿದ್ಧಳಿದ್ದೇನೆಂದು ಪ್ರತ್ಯುತ್ತರಿಸಿದರು.
ಪ್ರತಿ ಹೆರಿಗೆಗೆ ಹಣ ಪಡೆಯುತ್ತಾರೆ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕರ್ನಾಟಕ ಭೀಮ ಸೇನಾ ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷ ಭೀಮಣ್ಣ ದೊಡ್ಡಮನಿ, ಕಾರ್ಯದರ್ಶಿ ಶರಣು ನಾಯಕ್, ಉಪಾಧ್ಯಕ್ಷ ಕಳಕೇಶ ನಾಯಕ್, ಸಂಘಟನಕಾರ ಪ್ರಕಾಶ ದನ್ನೂರು, ಕೆ.ಬೋದೂರು ಗ್ರಾಪಂ ಸದಸ್ಯ ಯಮನೂರ ರಾಠೋಡ್, ಶಿಶುವಿನ ತಂದೆ ರಾಮಪ್ಪ ರಾಠೋಡ್ ಆರೋಪಿಸಿದರು. ಶಿಶುವನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿರುವ ವೈದ್ಯೆ ಚಂದ್ರಕಲಾಗೆ ಮುಖ್ಯಾಧಿಕಾರಿ ಕೆ.ಎಸ್.ರಡ್ಡಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.