

ಆಲೂರು: ಪ್ರಯತ್ನಶೀಲ ಮನುಷ್ಯನಿಗೆ ಜಯ ನಿಶ್ಚಿತ. ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು. ಹಣೆಬರಹದಲ್ಲಿ ಭವಿಷ್ಯವಿಲ್ಲ. ಹಣೆಯ ಬೆವರಿನಲ್ಲಿ ಉಜ್ವಲ ಭವಿಷ್ಯ ಇದೆ ಎಂಬುದನ್ನು ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ 46ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ 4ನೇ ವಾರ್ಷಿಕೋತ್ಸವ-ವಧರ್ಂತಿ ಮಹೋತ್ಸವದ ಅಂಗವಾಗಿ ಐದನೇ ದಿನ ಆಯೋಜಿಸಿದ್ದ ಧರ್ಮ ಸಂವರ್ಧನಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಿಜವಾದ ಸಂಬಂಧಗಳು ಸಮಯ ಮತ್ತು ಗೌರವ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಎಷ್ಟೇ ಸಮಸ್ಯೆಗಳು ಬಂದರೂ ಆತ್ಮ ವಿಶ್ವಾಸದಿಂದ ಬಾಳಿದರೆ ಜಯ ನಿಶ್ಚಿತ. ಬದುಕು ಹೇಗೆ ಸಾಗಿಸುವುದೆಂದು ಭಯಪಡಬಾರದು. ಗೂಡಿನಿಂದ ಹೊರಕ್ಕೆ ಹೋಗುವ ಪಕ್ಷಿಗೆ ಕಾಳುಗಳು ಎಲ್ಲಿವೆ ಎಂದು ಗೊತ್ತಿರುವುದಿಲ್ಲ. ಆದರೂ ಹಾರುತ್ತ ಹೋಗಿ ತನ್ನ ಆಹಾರವನ್ನು ಪಡೆಯುತ್ತದೆ. ಮನುಷ್ಯ ಸಹ ಕ್ರಿಯಾಶೀಲನಾಗಿ ಶ್ರಮದಿಂದ ದುಡಿದರೆ ಜೀವನ ಸಮೃದ್ಧಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅದೇ ದಾರಿಯಲ್ಲಿ ಶರಣರು ಶ್ರಮಿಸಿ ದುಡಿಮೆಯ ಮಹತ್ವವನ್ನು ಸಾರಿದ್ದಾರೆ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಅಧ್ಯಾತ್ಮ ಜೀವಿಗಳಾಗಿದ್ದು ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಮಾರ್ಗದರ್ಶನ ಮಾಡುತ್ತಿರುವುದು ಅತ್ಯಂತ ಸಂತೋಷವನ್ನು ಉಂಟು ಮಾಡಿದೆ. ಗುರು ಪರಂಪರೆಯ ಆದರ್ಶ ವಿಚಾರ ಧಾರೆಗಳನ್ನು ಜನಮನಕ್ಕೆ ಮುಟ್ಟಿಸಿದ ಶ್ರೇಯಸ್ಸು ಅವರದಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಮಹತ್ವ: ಕಾರ್ಯಕ್ರಮದ ನೇತೃತ್ವ ವಹಿಸಿದ ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಿನ ವಿಕಾಸಕ್ಕೆ ಅಧ್ಯಾತ್ಮದ ಅರಿವು ಮತ್ತು ಗುರು ಮಾರ್ಗದರ್ಶನ ಅವಶ್ಯಕ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಮಹತ್ವವನ್ನು ಕೊಟ್ಟಿದ್ದಾರೆ. ಲಿಂ. ರುದ್ರಮುನಿ ಶಿವಾಚಾರ್ಯಸ್ವಾಮಿಗಳ 46ನೇ ವರ್ಷದ ಪುಣ್ಯ ಸ್ಮರಣೋತ್ಸವ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿದ್ದು ಸಮಾಧಾನ ತಂದಿದೆ ಎಂದ ಅವರು, ಪಟ್ಟಾಧಿಕಾರದ 4ನೇ ವರ್ಷದ ವರ್ಧಂತಿ ಜನ್ಮ ದಿನೋತ್ಸವ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ ಎಂದರು.
ಮುಂದಿನ ಪೀಳಿಗೆಗೆ ಸಂಸ್ಕೃತಿ ಬಿತ್ತುವ ಕೆಲಸವಾಗಲಿ: ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಮಂದಿರಗಳು ಹೆಚ್ಚಾಗುತ್ತಿದ್ದು, ಭಕ್ತಿಯ ಸಂಕೇತವಿದು. ಕೇವಲ ಮಂದಿರಗಳನ್ನು ಕಟ್ಟಿ ಬಿಡದೆ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಬಿತ್ತುವ ಕೆಲಸ ಆಗಬೇಕು. ಆ ಕೆಲಸವನ್ನು ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಶ್ರೀ ಮಠದ ಪೀಠಾಧ್ಯಕ್ಷರಾದಾಗಿನಿಂದಲೂ ಮಾಡುತ್ತ ಬರುತ್ತಿದ್ದಾರೆ, ಕಾರ್ಜುವಳ್ಳಿ ಹಿರೇಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಎಂದು ತಿಳಿಸಿದರು.
ದುರ್ಗಾ ಮೂಲಮಂತ್ರ ಹೋಮ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಮಠದ ಆವರಣದಲ್ಲಿ ದುರ್ಗಾ ಮೂಲಮಂತ್ರ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ, ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಈಶಾವಾಸೋಪನಿಷತ್ ಪಾರಾಯಣ ಪೂರ್ವಕ ಸುವರ್ಣಾಭಿಷೇಕ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಮೇಧಾಸೂಕ್ತ ಪಾರಾಯಣ ಪೂರ್ವಕ ಇಕ್ಷುರಸಾಭಿಷೇಕ, ತುಳಸಿಪತ್ರಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ತರಕಾರಿ ಅಲಂಕಾರ ಶಮಿಪತ್ರಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ಇಷ್ಟನಾಗ, ಸಿದ್ದಿನಾಗ, ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ವಿಷ್ಣುಸೂಕ್ತ ಪಾರಾಯಣ ಪೂರ್ವಕ ನಾನಾಫಲ-ಶರ್ಕರಾಭಿಷೇಕ, ಕರವೀರ ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ. ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಜರುಗಿತು.
ಹಾಸನ ಜಿಲ್ಲಾ 2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮೈತ್ರಿ ಎಸ್. ಮಾದಗುಂಡಿ ಅವರಿಂದ ಭರತನಾಟ್ಯ ಜರುಗಿತು.
ಕಾರ್ಯಕ್ರಮದಲ್ಲಿ ಕಡೆನಂದಿಹಳ್ಳಿ ತಪೋಕ್ಷೇತ್ರ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶ್ರೀ ರಾಮಲಿಂಗೇಶ್ವರಮಠ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳು, ನಾಗವಂದ ಹೊರಗಿನಮಠ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕೆಸವತ್ತೂರು ಮಠದ ಶ್ರೀ ಬಸವರಾಜ ಸ್ವಾಮಿಗಳು, ಅರಕಲಗೂಡು ಮಲ್ಲೇಶ್ ಸ್ಟೋನ್ ಕ್ರಷರ್ ಮಾಲೀಕ ಸುರೇಶ್, ಹಾಸನ ಶಿವಗಂಗಾ ಗ್ರಾನೈಟ್ಸ್ ಮಾಲೀಕ ಎಸ್. ಎಚ್. ರಾಜಶೇಖರ್, ಬಾಳುಪೇಟೆ ಕಾಫಿ ಬೆಳೆಗಾರ ಬಿ. ಎಸ್. ಮಲ್ಲಿಕಾರ್ಜುನ್, ಕಾರ್ಜುನಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಆಡಳಿತಾಧಿಕಾರಿ ಎಸ್. ಎಸ್. ಶಿವಮೂರ್ತಿ ಸಿದ್ದಾಪುರ, ಸಲಹೆಗಾರ ಡಾ. ಎಂ. ಈ.ಜಯರಾಜು, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೋಟೆ ಮಹೇಶ್, ಶ್ರೀಮಠದ ಆತ್ಮೀಯ ಪುರೋಹಿತ ಬಳಗದವರು ಇದ್ದರು.