

ಚಿಕ್ಕಮಗಳೂರು: ಆಧುನಿಕ ಜಗತ್ತಿನಲ್ಲಿ ಹಳೆಯ ವಿಚಾರಧಾರೆಗಳ ಅವಶ್ಯಕತೆ ಇಲ್ಲ ಎಂದು ಕೆಲವರು ನಿರ್ಲಕ್ಷ ಮನೋಭಾವನೆ ತಾಳಿದ್ದಾರೆ. ಆದರೆ ಹಳೆಯ ವಿಚಾರಧಾರೆಗಳಲ್ಲಿರುವ ಸಾಮರ್ಥ್ಯ ಹಾಗೂ ಶಕ್ತಿ ಹೊಸ ವಿಚಾರಧಾರೆಗಳಲ್ಲಿ ಕಾಣುವುದು ಕಷ್ಟ. ಜೀವನದಲ್ಲಿ ಉಜ್ವಲ ಭವಿಷ್ಯ ಕಾಣಬೇಕಾದರೆ ಹಳೆಯ ಹಾಗೂ ಹೊಸ ವಿಚಾರಧಾರೆಗಳ ಸಮೀಕರಣ ಮಾಡಿಕೊಳ್ಳಬೇಕು ಎಂದು ಶ್ರೀಮದ್ ರಂಭಾಪುರಿ ಪೀಠದ ಶ್ರೀ ವೀರ ಸಿಂಹಾಸನಾದೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾಚಗೊಂಡನಹಳ್ಳಿಯ ಶ್ರೀ ಬೇರುಗಂಡಿ ಬೃಹನ್ ಮಠದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಹೊಸ ಹಾಗೂ ಹಳೆ ವಿಚಾರಧಾರೆಗಳ ಸಮೀಕರಣದಿಂದ ನಮ್ಮ ಭವಿಷ್ಯ ಉಜ್ವಲವಾಗುವ ಜೊತೆಗೆ ಸಮಾಜಕ್ಕೆ ಹೆಚ್ಚಿನ ಗೌರವ ಘನತೆಯನ್ನು ತಂದುಕೊಡಲು ಸಾಧ್ಯವಿದೆ ಎಂದು ಹೇಳಿದರು.
ಮನುಷ್ಯರಿಗೆ ಸ್ವಾಭಿಮಾನ ಬೇಕೇ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾಭಿಮಾನ ಕಡಿಮೆಯಾಗುತ್ತಿದೆ. ಈ ಕಾರಣದಿಂದಾಗಿ ಸಮಾಜದ ಎಲ್ಲ ರಂಗಗಳಲ್ಲಿಯೂ ಒಂದಲ್ಲ ಒಂದು ಸಮಸ್ಯೆಗಳು ಹಾಗೂ ಸಂಘರ್ಷಗಳನ್ನು ಕಾಣುತ್ತಿದ್ದೇವೆ. ಮನುಷ್ಯರು ಮೆಚ್ಚುವ ಕಾರ್ಯ ಮಾಡುವ ಜೊತೆಗೆ ದೈವ ಮೆಚ್ಚುವಂತ ಕಾರ್ಯಗಳನ್ನು ಮಾಡಬೇಕು ಅವುಗಳಲ್ಲಿಯೇ ಶ್ರೇಷ್ಠತೆಯನ್ನು ಕಾಣಲು ಸಾಧ್ಯ ಎಂದರು.
ದೇವರು ನಮಗೆ ಎಲ್ಲವನ್ನೂ ನೀಡಿದ್ದಾನೆ. ನಾವು ನಿಂತ ನೆಲ, ಕುಡಿಯುವ ನೀರು, ಉಸಿರಾಡುವ ಗಾಳಿ ಇವೆಲ್ಲವೂ ಭಗವಂತ ನಮಗೆ ಕೊಟ್ಟಿರುವ ಕೊಡುಗೆಗಳು. ಈ ಕೊಡುಗೆಗಳನ್ನೆಲ್ಲ ಪಡೆದ ನಾವು ಭಗವಂತನಿಗೆ ಪ್ರತಿಯಾಗಿ ದಿನನಿತ್ಯ ನಿತ್ಯ ಆತನ ಸ್ಮರಣೆ ಮಾಡಿಕೊಂಡು ಬಂದರೆ ನಮ್ಮೆಲ್ಲರ ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇವರನ್ನು ನಂಬಿ ನಡೆಯುವ ಆಸ್ತಿಕರು ನಮ್ಮ ಸಮಾಜದಲ್ಲಿದ್ದಾರೆ. ಅದೇ ರೀತಿ ದೇವರಲ್ಲಿ ಅಪನಂಬಿಕೆ ಅವಿಶ್ವಾಸ ಇರುವಂತ ನಾಸ್ತಿಕರು ನಮ್ಮಲ್ಲಿದ್ದಾರೆ. ಆದರೆ ನಾಸ್ತಿಕರೂ ಕೂಡ ಕೊನೆಯಲ್ಲಿ ದೇವರಿಗೆ ಶರಣಾದಂತ ಅನೇಕ ಸಂಗತಿಗಳನ್ನು ಇತಿಹಾಸ ಪುಟಗಳಿಂದ ತಿಳಿಯಲು ಸಾಧ್ಯವಿದೆ ಎಂದು ಹೇಳಿದರು.
ಸ್ವಾರ್ಥ ರಹಿತವಾದ ಬದುಕಿಗೆ ಬೆಲೆ ನೆಲೆಯಿದೆ. ಅದರಲ್ಲಿ ಅಂಥ ಅದ್ಭುತ ಶಕ್ತಿಯಿದೆ. ಜೀವನದಲ್ಲಿ ಉತ್ಸಾಹ ಇದ್ದರೆ ಸಾಧನೆ ಸಿದ್ಧಿಯಾಗುತ್ತದೆ. ಜನ ಮೆಚ್ಚುವಂತಹ ಕೆಲಸ ದೊಡ್ಡದಾದರೆ ದೈವ ಮೆಚ್ಚುವಂತಹ ಕೆಲಸ ಅದಕ್ಕಿಂತಲೂ ದೊಡ್ಡದು. ಮನುಷ್ಯ ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ಆ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ಬೇಕು. ಮನುಷ್ಯನಲ್ಲಿ ದೃಢ ಸಂಕಲ್ಪ ಗಟ್ಟಿಯಾಗಿದ್ದರೆ ಸತ್ಫಲ ಕಟ್ಟಿಟ್ಟ ಬುತ್ತಿ. ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಸೌಂದರ್ಯ ಜನರ ಗಮನ ಸೆಳೆಯಬಹುದು. ಆದರೆ ವ್ಯಕ್ತಿತ್ವ ಮನಸ್ಸನ್ನು ಆವರಿಸುತ್ತದೆ. ಭಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳಿರುವ ಮನುಷ್ಯನಿಗೆ ಇಲ್ಲ. ಬದುಕಿಗೆ ಬಲ ಬರಬೇಕಾಗಿದ್ದರೆ ಸತ್ಕಾರ್ಯ ಸೇವಾ ಮನೋಭಾವ ಮತ್ತು ಉತ್ತಮ ಸಂಸ್ಕಾರ ಪಡೆದರೆ ಬಾಳಿನಲ್ಲಿ ಶ್ರೇಯಸ್ಸನ್ನು ಕಾಣಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನೊಣವಿನಕೆರೆ ಶ್ರೀಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಧರ್ಮ ಕಾರ್ಯಗಳು ಹೆಚ್ಚು ಹೆಚ್ಚು ನಡೆದಾಗ ಸಮಾಜದಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿಯೇ ಬೇರುಗಂಡಿ ಮಠವೂ ದಿಟ್ಟ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಶ್ರೀ ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಲು ಹಣ ಬೇಕು. ಹೊಂದಿಕೊಂಡು ಬಾಳಲು ಗುಣ ಬೇಕು. ಕಟ್ಟವರು ತುಂಬಾ ಬೆಳೆಯಬಹುದು. ಆದರೆ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು ಆದರೆ ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನ ಲಿಂ.ಚಂದ್ರಶೇಖರ ಶ್ರೀಗಳ ಆಶೀರ್ವಾಧ ಮತ್ತು ಭಕ್ತರ ಸಹಕಾರದಿಂದ ಇಷ್ಟೆಲ್ಲ ಕಾರ್ಯ ಮಾಡಲು ಸಾಧ್ಯವಾಗಿದೆ. ೧೨ ವರ್ಷಗಳ ಅವಧಿಯಲ್ಲಿ ನಡೆದಿರುವ ಕಾರ್ಯಗಳು ಸಂತೃಪ್ತಿ ತಂದಿವೆ ಎಂದರು.
ಧರ್ಮಸಭೆಯನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪಂಚಗೃಹ ಹಿರೇಮಠದ ಶ್ರೀ ಅಬಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಅಖಿಲಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಚ್.ಎಂ.ಲೋಕೇಶ್, ಪ್ರಮುಖರಾದ ದೇವಾನಂದ್, ದಾನಿ ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.
ರಂಭಾಪುರಿ ಪೀಠದಲ್ಲಿ ಶ್ರೀರೇಣುಕಾಚಾರ್ಯರ ಮೂರ್ತಿ ನಿರ್ಮಾಣ
ಬಾಳೆಹೊನ್ನೂರಿನಲ್ಲಿರುವ ಶ್ರೀರಂಭಾಪುರಿ ಪೀಠದಲ್ಲಿ ಶ್ರೀ ರೇಣುಕಾಚಾರ್ಯರ ೫೧ ಅಡಿ ಎತ್ತರದ ಮೂರ್ತಿ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಮೂರ್ತಿ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.
೧೨ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗುತ್ತಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ೫ ಕೋಟಿ ರೂಪಾಯಿ ಅನುದಾನ ನೀಡಿದ್ದರು. ಆದರೆ ಬಂದ ಯಾವ ಸರ್ಕಾರಗಳಿಂದಲೂ ಮಠಕ್ಕೆ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.
೨೦೨೫ರ ಶ್ರೀ ರೇಣುಕಾಚಾರ್ಯರ ಜಯಂತಿಯಂದು ನಿರ್ಮಾಣವಾಗುತ್ತಿರುವ ಮಂಗಲ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವ ಸಂಕಲ್ಪ ಮಾಡಲಾಗಿದೆ. ಭಕ್ತರು ಸಹಕಾರ ನೀಡಿದರೆ ಯಾವುದೂ ಅಸಾಧ್ಯವಲ್ಲ. ಇದೇ ಆಶಾವಾದದಿಂದಲೇ ಕೆಲಸ ಮಾಡುತ್ತಿದ್ದೇವೆ. ಶಾಸಕ ಟಿ.ಡಿ.ರಾಜೇಗೌಡ ಅವರು ೨೫ ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಅವರು ಕನಿಷ್ಟ ೫೦ ಲಕ್ಷ ರೂ. ಅನುದಾನ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.
ಮಠಾಧೀಶರಿಂದ ಧರ್ಮ ಉಳಿಯಲು ಸಾಧ್ಯ
ಧರ್ಮ ಉಳಿಸಲು ರಾಜಕಾರಣಿಗಳ ಅಗತ್ಯವಿಲ್ಲ ಬದಲಿಗೆ ಮಠಾಧೀಶರಿಂದ ಮಾತ್ರ ಧರ್ಮ ಉಳಿಯಲು ಸಾಧ್ಯ ರಾಜಕಾರಣಿಗಳು ಮಠಾಧೀಶರಿಗೆ ಸಹಕಾರವನ್ನು ನೀಡಿದರೆ ಸಾಕು ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ರಾಜಕಾರಣಿಗಳ ಸ್ವಾರ್ಥಕ್ಕಾಗಿ ಧರ್ಮಗಳ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ. ಇದರಿಂದ ಮುಂದೆ ದೇಶ ವಿನಾಶದ ಅಂಚಿಗೆ ಹೋಗುವ ಅಪಾಯವಿದೆ. ಧರ್ಮದ ಹೆಸರಿನಲ್ಲಿ ಲಾಭ ಪಡೆದ ರಾಜಕಾರಣಿಗಳು ಮಠದ ಅಭಿವೃದ್ಧಿಗೆ ಮುಂದಾದರೆ ಕೇವಲ ನಾಲ್ಕು ವರ್ಷದಲ್ಲಿ ಎಲ್ಲಾ ಮಠಗಳು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಆದರೆ ಧರ್ಮದ ಹೆಸರಿನಲ್ಲಿ ಲಾಭ ಪಡೆದವರು ಇದಕ್ಕೆ ಮುಂದೆ ಬರುವುದಿಲ್ಲ ಎಂದು ಹೇಳಿದರು.
ಶ್ರೀ ರಂಭಾಪುರಿ ಮಠಕ್ಕೆ ೨೫ ಲಕ್ಷ ಹಾಗೂ ಬೇರುಗಂಡಿ ಮಠಕ್ಕೆ ೧೦ ಲಕ್ಷ ರೂ. ಅನುದಾನ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.