ಅಪಾಯಕ್ಕೆ ಕಾದಿವೆ ತಡೆಗೋಡೆ ಇಲ್ಲದ ಸೇತುವೆಗಳು

10kulagod2-STORYa.JPG
Published on

ಕುಲಗೋಡ: ಹಳ್ಳಕೊಳ್ಳ, ನದಿಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸುವಾಗ ಮುತುವರ್ಜಿ ವಹಿಸಲಾಗುತ್ತದೆ. ಗುಣಮಟ್ಟದಲ್ಲಿ ರಾಜಿಯಾಗದಂತೆ ಎಚ್ಚರಿಕೆ ವಹಿಸಲಾಗಿರುತ್ತದೆ. ಅಂಥ ಗಟ್ಟಿಮುಟ್ಟಾದ ಸೇತುವೆಗಳಿಗೆ ತಡೆಗೋಡೆ ನಿರ್ಮಿಸದೆ ಹಾಗೇ ಬಿಟ್ಟರೆ ಅನಾಹುತಗಳು,  ಪ್ರಾಣಹಾನಿಯೂ ಸಂಭವಿಸುತ್ತದೆ.

ತಡೆಗೋಡೆ ಇಲ್ಲದ ಅವರಾದಿ ಸೇತುವೆ.
ತಡೆಗೋಡೆ ಇಲ್ಲದ ಅವರಾದಿ ಸೇತುವೆ.

ಮೂಡಲಗಿ ತಾಲೂಕಿನ ನಾಲ್ಕು ಬ್ರಿಡ್ಜ್ ಕಂ ಬಾಂದಾರಗಳಿಗೆ ತಡೆಗೋಡೆಯೇ ಇಲ್ಲ. ಇದರಿಂದ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸುಣಧೋಳಿ, ಹುಣಶ್ಯಾಳ ಪಿ.ವೈ, ಢವಳೇಶ್ವರ, ಅವರಾದಿ ಗ್ರಾಮದ ಸೇತುವೆಗಳಿಗೆ ತಡೆಗೋಡೆ ಸಮಸ್ಯೆ ಇದೆ. ಹಲವು ಭಾರಿ ತಡೆಗೋಡೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಗಮನಹರಿಸುತ್ತಿಲ್ಲ. ಈ ಸೇತುವೆಗಳನ್ನು ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿರದೆ ಅಪಾಯಕಾರಿಯಾಗಿವೆ. ಹಾಗಾಗಿ, ಈ ಸೇತುಗಳಿಗೆ ಬದಲಿ ಸೇತುವೆ ನಿರ್ಮಾಣವಾಗಬೇಕಿದೆ.

ಸುಣಧೋಳಿ ಬ್ಯಾರೇಜ್ ಮೂಡಲಗಿ ತಾಲೂಕಿನ ಮುಖ್ಯ ರಸ್ತೆಯಾಗಿದೆ. ಢವಳೇಶ್ವರ ಬ್ರಿಡ್ಜ್ ಕಂ ಬಾಂದಾರ ಜತ್ತ-ಜಾಂಬೋಟಿ ಮುಖ್ಯ ರಸ್ತೆಯಾಗಿದೆ. ಅವರಾದಿ ಸೇತುವೆ ಮಹಾಲಿಂಗಪೂರದ ಸಂಪರ್ಕ ಕೊಂಡಿಯಾಗಿದೆ.
ಕೆಲ ಸೇತುವೆಗಳು ಹೊಲ, ಮನೆ ಸಂಪರ್ಕಕ್ಕೆ ಮುಖ್ಯವಾದರೆ, ನಗರಕ್ಕೆ ತಲುಪಲು ಇನ್ನೂ ಕೆಲವು ಮುಖ್ಯವಾಗಿವೆ. ಸಾಮರ್ಥ್ಯ ಮೀರಿದ ಭಾರಿ ವಾಹನಗಳು, ಕಬ್ಬು ತುಂಬಿದ ಟ್ರಾೃಕ್ಟರ್‌ಗಳು ಓಡಾಡುತ್ತಿವೆ. ಇದರಿಂದ ಸೇತುವೆಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ.

ಪ್ರತಿ ಸೇತುವೆಗಳ ಮೇಲಿನ ರಸ್ತೆಗಳು ಕಿರಿದಾಗಿದ್ದು, ಒಂದೇ ವಾಹನ ಚಲಿಸಲು ಅನುಕೂಲಕರವಾಗಿವೆ. ವಾಹನ ಬರುವಾಗ ದ್ವಿಚಕ್ರ, ಸೈಕಲ್ ಸವಾರರು ಸೇತುವೆ ಆರಂಭಕ್ಕೂ ಮುನ್ನವೆ ಪಕ್ಕಕ್ಕೆ ಸರಿದು ನಿಲ್ಲಬೇಕಿದೆ. ಅಕಸ್ಮಾತ್ ಮುನ್ನುಗ್ಗಿದರೆ ಅಪಾಯ ಗ್ಯಾರಂಟಿ. ಮಳೆಗಾಲದಲ್ಲಂತೂ ನದಿಗಳು ಮೈದುಂಬಿ ಹರಿದು ಸೇತುವೆ ಜಲಾವೃತವಾಗಿ ಜನರು ಹೈರಾಣಾಗುತ್ತಾರೆ.
ದುರ್ಘಟನೆಗಳು: ಅವರಾದಿ ಸೇತುವೆ ಮೇಲಿಂದ ಜು.10ರಂದು ಇಬ್ಬರು ಬೈಕ್ ಸವಾರರು ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. 2018ರಲ್ಲಿ ಸುಣಧೋಳಿ ಬ್ರಿಡ್ಜ್ ಮೇಲೆ ಸೈಕಲ್ ಮೇಲೆ ಶಾಲೆಗೆ ಹೋಗುತ್ತಿದ್ದ ಬಾಲಕ ನದಿಗೆ ಬಿದ್ದು ಮೃತಪಟ್ಟಿದ್ದ. 2017ರಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಮಳೆಯಾಗಿರುವ ಪರಿಣಾಮ ಈ ಭಾಗದ ಸೇತುವೆಗಳು ಮುಳುಗಿದ್ದವು. ಸುಣಧೋಳಿ ಸೇತುವೆ ಮೇಲೆ ದಾಟುತ್ತಿದ್ದ ಲಾರಿಯೊಂದು ನೀರಲ್ಲಿ ಕೊಚ್ಚಿಹೋಗಿ ಚಾಲಕ ಈಜಿ ಪಾರಾಗಿದ್ದ. ದಶಕಗಳಿಂದ ಒಂದಿಲ್ಲೊಂದು ದುರ್ಘಟನೆಗಳು ಸಂಭವಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಸುಮ್ಮನಿರುವುದು ವಿಪರ್ಯಾಸ. ಕೂಡಲೇ ಸೇತುವೆಗಳಿಗೆ 4 ಅಡಿ ಎತ್ತರದ ತಡೆಗೋಡೆ ನಿರ್ಮಿಸಬೇಕೆಂದು ಅವರಾದಿ ಗ್ರಾಮಸ್ಥ ಮಹಾಲಿಂಗ ಪಾಟೀಲ ಆಗ್ರಹಿಸಿದ್ದಾರೆ.

ಬ್ರಿಡ್ಜ್ ಕಂ ಬ್ಯಾರೇಜ್ ಇರುವುದು ನೀರು ಸಂಗ್ರಹಕ್ಕೆ ಮಾತ್ರ. ವಾಹನ ಸಂಚಾರಕ್ಕೆ ಅಲ್ಲ. ವರ್ಷಕ್ಕೆ 4 ಬಾರಿ ಗೇಟ್ ತೆಗೆಯುವುದು, ಹಾಕುವುದು ಮಾಡಬೇಕು. ತಡೆಗೋಡೆ ನಿರ್ಮಿಸಿದರೆ  ಗೇಟ್ ಕೆಲಸಕ್ಕೆ ಅಡಚಣೆಯಾಗುತ್ತದೆ. ಹೊಸ ಬ್ಯಾರೇಜ್‌ಗೆ ಪ್ರಸ್ತಾವನೆ ಕಳುಹಿಸಲಾಗಿದೆ.|ಲಕ್ಷ್ಮಣ ಬಂಡಿವಡ್ಡರಲೋಕೋಪಯೋಗಿ ಇಲಾಖೆ ಎಇಇ ಗೋಕಾಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net