ಟಿಪ್ಪರ್ ಚಾಲಕರ ಆಟಾಟೋಪಕ್ಕೆ ಬ್ರೇಕ್

New gb 1 New
Published on

ಹುಬ್ಬಳ್ಳಿ : ಇನ್ನು ಮುಂದೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಟಿಪ್ಪರ್ ವಾಹನ ಚಾಲಕರು ನಿತ್ಯ ಕರ್ತವ್ಯ ಆರಂಭಿಸುವ ಮೊದಲು ಮದ್ಯಪಾನ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಸೇವಿಸಿರುವ ಬಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ. ಟಿಪ್ಪರ್ ವಾಹನ ಚಾಲಕರು ಕರ್ತವ್ಯದ ಸಂದರ್ಭದಲ್ಲಿ ಮೊಬೈಲ್ ಫೋನ್​ನಲ್ಲಿ ಮಾತನಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು.

ಇಂತಹದೊಂದು ಠರಾವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು.

ಇಲ್ಲಿನ ಸೋನಿಯಾ ಗಾಂಧಿ ನಗರದಲ್ಲಿ ಸೋಮವಾರದಂದು ಟಿಪ್ಪರ್​ವೊಂದಕ್ಕೆ ಸಿಲುಕಿ ಬಾಲಕಿ ಮೃತಪಟ್ಟಿರುವ ಘಟನೆ ಹಿನ್ನೆಲೆಯಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯ ಸಂದಿಲ್​ಕುಮಾರ ಅವರ ಗಮನ ಸೆಳೆಯುವ ಸೂಚನೆ ಮೇರೆಗೆ ನಡೆದ ಚರ್ಚೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಟಿಪ್ಪರ್ ಚಾಲಕರ ವರ್ತನೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.

ಚಾಲಕರು ಕರ್ತವ್ಯದ ನಂತರವೂ ಟಿಪ್ಪರ್​ಗಳನ್ನು ಅವುಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ನಿಲುಗಡೆಗೊಳಿಸದೇ ಬಡಾವಣೆಗಳಲ್ಲಿ ನಿಲ್ಲಿಸಿರುತ್ತಾರೆ. ಸಂಬಂಧಿಕರಿಗೆ ವಾಹನ ಚಾಲನೆಯನ್ನು ಕಲಿಸುತ್ತಾರೆ ಎಂದು ಎಐಎಂಐಎಂ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ದೂರಿದರು.

ಟಿಪ್ಪರ್​ನಡಿ ಸಿಲುಕಿ ಸಾವಿಗೀಡಾದ 6 ವರ್ಷದ ಬಾಲಕಿ ಹಮೀದಾಬಾನು ಕಬಾಡೆ ಪರಿವಾರಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ ಆಗ್ರಹಿಸಿದರು. ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ಟಿಪ್ಪರ್ ಚಾಲಕರಿಗೆ ತರಬೇತಿ ನೀಡಬೇಕು ಎಂದು ಬಿಜೆಪಿ ಸದಸ್ಯ ರಾಜಣ್ಣ ಕೊರವಿ ಸಲಹೆ ನೀಡಿದರು.

ಟಿಪ್ಪರ್ ಚಾಲಕರು ಕರ್ತವ್ಯದ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಬೇಕು ಹಾಗೂ ಕಡ್ಡಾಯವಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕೆಂದು ವೀರಣ್ಣ ಸವಡಿ ಹೇಳಿದರು. ಟಿಪ್ಪರ್ ಚಾಲಕರಲ್ಲಿ ಯಾರಾದರೂ ಅಪರಾಧ ಹಿನ್ನೆಲೆಯುಳ್ಳವರು ಇರಬಹುದಾದ ಬಗ್ಗೆ ಪರಿಶೀಲನೆ ನಡೆಸಬೇಕೆಂಬ ಸಲಹೆಗಳು ಸಹ ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯರಿಂದ ಕೇಳಿಬಂದವು.

ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮಹಾಪೌರ ರಾಮಪ್ಪ ಬಡಿಗೇರ, ಟಿಪ್ಪರ್ ಗುತ್ತಿಗೆ ಪಡೆದ ಏಜೆನ್ಸಿಯೂ ಪರಿಹಾರ ನೀಡುವಂತೆ ಆದೇಶ ನೀಡಿದರು.

ಇದಕ್ಕೂ ಮೊದಲು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ ಹತ್ಯೆಯ ಬಗ್ಗೆ ರ್ಚಚಿಸಿ, ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಸಭಾನಾಯಕ ತಿಪ್ಪಣ್ಣ ಮಜ್ಜಗಿ ಅವರು ವಿಷಯ ಮಂಡಿಸಿ, ಪ್ರಕೃತಿಯ ಸೌಂದರ್ಯ ಸವಿಯಲು ಹೋದವರ ಹೆಂಡತಿ, ಮಕ್ಕಳ ಎದುರೇ ಹತ್ಯೆಗೈದ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಮಯೂರ ಮೋರೆ ಮಾತನಾಡಿ, ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಮರಳಿ ಕರೆತರಲು ಸಚಿವ ಸಂತೋಷ ಲಾಡ್ ಅವರೊಂದಿಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಕಂಡ ಘಟನೆಯನ್ನು ವಿವರಿಸಿದರು. ಚಂದ್ರಶೇಖರ ಮನಗುಂಡಿ, ರಾಧಾಬಾಯಿ ಸಫಾರೆ ಮತ್ತಿತರ ಸದಸ್ಯರು ಮಾತನಾಡಿ, ಉಗ್ರರ ಕೃತ್ಯ ಖಂಡಿಸಿದರು.

ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದ ಮುಖ್ಯ ಪಶು ವೈದ್ಯಾಧಿಕಾರಿಯಿಂದ ಸದನದಲ್ಲಿ ಉತ್ತರ ಕೊಡಿಸಿದ ಪಾಲಿಕೆ ಆಯುಕ್ತರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಶಿವಕುಮಾರ ಮೆಣಸಿನಕಾಯಿ ಅವರು, ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಿಡಾಡಿ ದನಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎ.ಜಿ. ಕುಲಕರ್ಣಿ ಉತ್ತರ ನೀಡಲು ಬರುತ್ತಿದ್ದಂತೆಯೇ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಅಡ್ಡಿಪಡಿಸಿದರು. ಡಾ. ಕುಲಕರ್ಣಿ ಅವರನ್ನು ಮುಖ್ಯ ಪಶು ವೈದ್ಯಾಧಿಕಾರಿಯಿಂದ ಬಿಡುಗಡೆಗೊಳಿಸಿದ್ದರೂ ಸದನದಲ್ಲಿ ಯಾರನ್ನು ಕೇಳಿ ಉತ್ತರ ನೀಡುತ್ತಿದ್ದಾರೆ ? ಎಂದು ಪ್ರಶ್ನಿಸಿದರು.

ಪಾಲಿಕೆಯಲ್ಲಿ ಅಧಿಕಾರಿಗಳ ಕೊರತೆ ಇರುವ ಕಾರಣ ಡಾ. ಕುಲಕರ್ಣಿ ಅವರನ್ನು ಮರಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಆಯುಕ್ತ ಡಾ. ರುದ್ರೇಶ ಘಾಳಿ ಸಮಜಾಯಿಸಿ ನೀಡಲು ಯತ್ನಿಸಿದರು. ಸದನಕ್ಕೆ ಮಾಹಿತಿ ನೀಡದೇ ಡಾ. ಕುಲಕರ್ಣಿ ಅವರನ್ನು ಮರಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆ ಮೂಲಕ ಸದನಕ್ಕೆ ಅವಮಾನ ಮಾಡಲಾಗಿದೆ ಎಂದು ತಿಪ್ಪಣ್ಣ ಮಜ್ಜಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಹಾಪೌರರ ಗಮನಕ್ಕೆ ತಂದ ನಂತರವೇ ಡಾ. ಕುಲಕರ್ಣಿ ಅವರನ್ನು ಮರಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು. ಬಿಡಾಡಿ ದನಗಳ ಮಾಲೀಕರಿಗೆ ದಂಡ ವಿಧಿಸುವ ಹಾಗೂ ಮತ್ತಿತರ ಕ್ರಮ ಕೈಗೊಳ್ಳುವ ಬಗ್ಗೆ ಆಯುಕ್ತರೊಂದಿಗೆ ರ್ಚಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಮಪ್ಪ ಬಡಿಗೇರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net