

ಐನಾಪುರ: ನಮ್ಮ ಭಾಗದ ದೈವಗಳು ಸಾಮಾನ್ಯ ಜನರ ಆಹಾರ ಸ್ವೀಕರಿಸುತ್ತವೆ. ಸತ್ಯಸಿದ್ಧ ದೇವರು ಮಾತಾಡಿದ್ದು ಸತ್ಯವಾಗುತ್ತಿತ್ತು. ಅವರು ಭೋಗ ಜೀವನ ನಿರಾಕರಿಸಿ, ಮನುಷ್ಯ ಸಂಕುಲ ಹೊಟ್ಟೆ ತುಂಬ ಉಂಡು ಸಂತೃಪ್ತಿ ಕಾಣಲೆಂದು ಬಯಸಿದ್ದ ಪರಿಣಾಮಮೇ ರೊಟ್ಟಿ ಜಾತ್ರೆ ಹುಟ್ಟಿಕೊಂಡಿತು ಎಂದು ಕವಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.
ಪಟ್ಟಣದಲ್ಲಿ ನ.೯ರಿಂದ ೧೧ರವರೆಗೆ ನಡೆಯುವ ೫೧ ಸತ್ಯ ಸಿದ್ಧರ ಭೇಟಿ ನಿಮಿತ್ತ ಭಾನುವಾರ ರೊಟ್ಟಿ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬಲಿ, ಕಿಚಡಿ, ಪುಂಡಿಪಲ್ಲೆ, ಜೋಳದ ನುಚ್ಚು, ಹಾಗೂ ಜೋಳದ ರೊಟ್ಟಿ ನಮ್ಮ ಭಾಗದ ದೇವರ ಪ್ರಸಾದವಾಗಿ ನೈವೇದ್ಯವಾಗುತ್ತದೆ.
ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿರುವ ಮಹನೀಯರ ಸೇವೆ ಶ್ಲಾಘನೀಯ ಎಂದರು.
ಪಟ್ಟಣದ ಪಿಕೆಪಿಎಸ್ ಬ್ಯಾಂಕಿನಿಂದ ಬೃಹತ್ ರೊಟ್ಟಿ ಜಾತ್ರೆ ಆರಂಭವಾಗಿ ಸಕಲ ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಕೆರಿಸಿದ್ದೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ತೆರಳಿದ ರೊಟ್ಟಿ ಬುತ್ತಿ ಸಮಿತಿಯವರಿಗೆ ಮಹಿಳೆಯರು ಬುತ್ತಿ ಸಮರ್ಪಿಸಿದರು.
ಮುಖಂಡರಾದ ದಾದಾಸಾಬ್ ಜಂತನ್ನವರ, ಪ್ರಕಾಶ ಕೋರ್ಬು, ಸುರೇಶ ಕಾಗಲಿ, ಶ್ರೀಶೈಲ ನಾಂದನಿಕರ, ಶಿವಾನಂದ ಬೆಳಕೂಡ, ಅಪ್ಪಾಸಾಬ ಕಾಗಲಿ, ಸುದರ್ಶವ ಜಂತನ್ನವರ, ಕಾಳಪ್ಪ ಬಡಿಗೇರ, ಹನುಮಂತ ಸೊಂದಕರ, ಬಸವರಾಜ ಜೀರಗಾಳೆ, ನಿತಿನ ತೊಡಕರ್, ಅಪ್ಪಾಸಾಬ ಕಾರ್ತಗಿ ಇತರರಿದ್ದರು.