

ವಿಜಯಪುರ: ರೈತ ಸಂತೋಷದಿಂದ ಬದುಕಿ ಬಾಳಬೇಕಾದರೆ ಒಗ್ಗಟ್ಟಿನಿಂದ ಸಂಘಟನಾತ್ಮಕವಾಗಿ ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ಕಡಿಮೆ ಜಮೀನಿನಲ್ಲಿ ಅಧಿಕ ಆದಾಯ ಮಾಡಿಕೊಳ್ಳಲು ವಿಚಾರ ಗೋಷ್ಠಿ, ಚಿಂತನಾ ಸಭೆಗಳು ಆಗಾಗ ನಡೆಯಬೇಕು ಎಂದು ಹುಲಜಂತಿ ಮಾಳಿಂಗರಾಯ ಮಹಾರಾಜರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮೂರನೇ ರಾಜ್ಯಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶದಲ್ಲಿ ಕೃಷಿ ಮಳಿಗೆ ಉದ್ಘಾಟಿಸಿ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರೆಲ್ಲರೂ ಪಕ್ಷಾತೀತ, ಜಾತ್ಯತೀತವಾಗಿ ಸಂಘಟನೆಯಾದಾಗಲೇ ಎಲ್ಲ ಸರ್ಕಾರಿ ಯೋಜನೆಗಳು ಸಿಗುತ್ತವೆ. ರೈತರನ್ನು ಸಮಯ ಬಂದಾಗ ಎಲ್ಲರೂ ಉಪಯೋಗಿಸಿ ಬೀಸಾಕುತ್ತಾರೆ. ಇನ್ನು ಮುಂದೆ ರೈತರೆಲ್ಲರೂ ಜಾಗೃತರಾಗಿ ರೈತ ಕುಲದ ಬಗ್ಗೆ ಚಿಂತನೆ ಮಾಡಿ ಅಭಿವೃದ್ಧಿಯತ್ತ ಸಾಗಬೇಕು ಎಂದು ಸಲಹೆ ನೀಡಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಜಾರಿಗೆ ಮುಂದಾಗಬೇಕು. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕಾಗ ರೈತನ ಬೆವರಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ರೈತರ ಯಾವುದೇ ಸಮಸ್ಯೆಗಳಿದ್ದರೂ ಅವುಗಳಿಗೆ ನಾಡಿನ ಎಲ್ಲ ಮಠಾಧೀಶರು ಬೆಂಬಲವಾಗಿ ಇರುತ್ತೇವೆ ಎಂದರು.
ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಮಾತನಾಡಿ, ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೃಷಿ ಸಲಕರಣೆಗಳ ಬೆಲೆ ಮಾತ್ರ ಮುಗಿಲು ಮಟ್ಟಿದೆ. ಸರ್ಕಾರಗಳು ರೈತರನ್ನು ತುಳಿಯುವ ಕೆಲಸ ಮಾಡುತ್ತಿದ್ದು, ರೈತರೆಲ್ಲ ಒಗ್ಗಟಾಗಬೇಕು ಎಂದು ಸಲಹೆ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 25 ಸಾಧಕರಿಗೆ ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ ಹಾಗೂ ರೈತರಿಗಾಗಿ ಶ್ರಮಿಸಿದ ರೈತ ಹೋರಾಟಗಾರರಿಗೆ ರೈತ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೇನೆ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ದೇವಿಂದ್ರಪ್ಪಗೌಡ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಸುರೇಶ ಪರಗಣ್ಣವರ, ಮಲ್ಲನಗೌಡ ಪಾಟೀಲ, ರಾಮನಗೌಡ ಪಾಟೀಲ, ಜಕರಾಯ ಪೂಜಾರಿ, ವೀರಣ್ಣ ಸಜ್ಜನ, ಸೋಮು ಬಿರಾದಾರ, ಸಾತಲಿಂಗಯ್ಯ ಸಾಲಿಮಠ, ಈರಪ್ಪ ಕುಳೆಕುಮಟಗಿ, ಎಸ್.ಟಿ. ಪಾಟೀಲ, ನಿತೀನ ಮ್ಯಾಕೇರಿ, ಮಹಾದೇವಪ್ಪ ತೇಲಿ, ಶ್ರೀಶೈಲ ವಾಲಿಕಾರ, ಸುಜಾತಾ ಅವಟಿ, ಸಂಗೀತಾ ರಾಠೋಡ ಮತ್ತಿತರರಿದ್ದರು. ಅದಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಹೊರಟು ರಂಗಮಂದಿರ ಸೇರಿತು.