

StartFragment
ಹುಬ್ಬಳ್ಳಿ: ಮನೆಯ ಮುಂದೆ ಆಟವಾಡುತ್ತಿದ್ದ ಮೂರೂವರೆ ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಆತನ ಮೂಗು ತುಂಡರಿಸಿದ ಘಟನೆ ಇಲ್ಲಿನ ಗಣೇಶಪೇಟ ಬಾಕಳೆ ಗಲ್ಲಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ವಿವೇಕ ವಿಠ್ಠಲ ಡಾಂಗೆ ನಾಯಿ ದಾಳಿಗೆ ಗುರಿಯಾದ ಬಾಲಕ. ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ನಾಯಿ ದಾಳಿ ಮಾಡಿದೆ. ಅದನ್ನು ಗಮನಿಸಿದ ವ್ಯಕ್ತಿಯೊಬ್ಬರು ನಾಯಿಯನ್ನು ಓಡಿಸಿದ್ದಾರೆ. ಅಷ್ಟರೊಳಗೆ ಬಾಲಕನ ಮೂಗು ಕತ್ತರಿಸಿ ಮುಖ ರಕ್ತಸಿಕ್ತವಾಗಿತ್ತು. ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಗಣೇಶಪೇಟ ಸುತ್ತಮುತ್ತ ಬೀದಿ ನಾಯಿ ಹಾವಳಿ ಕುರಿತು ಈ ಹಿಂದೆ ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ 30 ರಿಂದ 40 ನಾಯಿಗಳ ಹಿಂಡು ಓಡಾಡುತ್ತಿದ್ದು, ನೆಮ್ಮದಿಯಿಂದ ಓಡಾಡುವಂತಿಲ್ಲ. ಇನ್ನಾದರೂ ಪಾಲಿಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಿಮ್ಸ್ನಲ್ಲಿ ಸಿಗಲಿಲ್ಲ ಚಿಕಿತ್ಸೆ
ನಾಯಿ ಕಡಿದ ಕೂಡಲೆ, ಬಾಲಕನನ್ನು ಆಟೋದಲ್ಲಿ ಕಿಮ್ಸ್ಗೆ ಕರೆದುಕೊಂಡು ಹೋಗಿದ್ದೆ. ‘ಸದ್ಯ ವೈದ್ಯರು ಇಲ್ಲ. ಆಮೇಲೆ ಬನ್ನಿ’ ಎಂದು ಸಿಬ್ಬಂದಿ ಹೇಳಿದರು. ಪ್ರಥಮ ಚಿಕಿತ್ಸೆಯನ್ನಾದರೂ ಮಾಡಿ ಎಂದರೂ ಮಾಡಲಿಲ್ಲ. ಆಂಬುಲೆನ್ಸ್ ಆದರೂ ಕೊಡಿ ಎಂದರೂ ಸ್ಪಂದಿಸಲಿಲ್ಲ. ಮತ್ತೆ ಆಟೋದಲ್ಲಿ ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. 4 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮೊದಲ ದಿನವೇ 60 ಸಾವಿರ ರೂ. ಶುಲ್ಕವಾಗಿದೆ. ಕಿಮ್ಸ್ನಲ್ಲಿ ಚಿಕಿತ್ಸೆ ಸಿಗದ ಕಾರಣ ಮಗನ ಪ್ರಾಣ ಉಳಿಸಲೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ. ಬಡವರಾದ ನಮಗೆ ಹಣ ಹೇಗೆ ಹೊಂದಿಸಬೇಕು ಎಂಬುದು ಅರ್ಥವಾಗುತ್ತಿಲ್ಲ. ಸಂಬಂಧಪಟ್ಟವರು ಪರಿಹಾರ ನೀಡಬೇಕು ಎಂದು ಬಾಲಕ ವಿವೇಕನ ತಂದೆ ವಿಠ್ಠಲ ಡಾಂಗೆ ಪತ್ರಿಕೆ ಬಳಿ ನೋವು ತೋಡಿಕೊಂಡಿದ್ದಾರೆ.
ಬೀದಿ ನಾಯಿ ಹಾವಳಿ ಕುರಿತು ಗಮನಕ್ಕೆ ಬಂದಿದ್ದು, ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲಾಗುವುದು. ಸ್ವತಃ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. | ಎಸ್.ಸಿ. ಬೇವೂರ ಸಹಾಯಕ ಆಯುಕ್ತ, ಪಾಲಿಕೆ ವಲಯ ಕಚೇರಿ 8
EndFragment