ಹನೂರಲ್ಲಿ ನೀರಸ ಪ್ರತಿಕ್ರಿಯೆ

 ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣ ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವುದು.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣ ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವುದು.
Published on

ಹನೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಸಾರಿಗೆ ನೌಕರರು ಕರೆ ನೀಡಿದ್ದ ಬಂದ್‌ಗೆ ಹನೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿತ್ತಾದರೂ ವಿದ್ಯಾರ್ಥಿಗಳು ಹಾಗೂ ಜನರು ಬಸ್‌ಗಾಗಿ ಪರದಾಡುವಂತಾಗಿತ್ತು. ಬಂದ್ ಹಿನ್ನಲೆ ತಾಲೂಕಿನ ಮ.ಬೆಟ್ಟ, ಹೂಗ್ಯಂ, ಒಡೆಯರಪಾಳ್ಯ ಹಾಗೂ ಇತರ ಭಾಗಗಳಿಗೆ ನಿತ್ಯ ಸಂಚರಿಸುತ್ತಿದ್ದ ಬಹುತೇಕ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ರಾತ್ರಿ ಮ.ಬೆಟ್ಟದಲ್ಲಿ ತಂಗಿದ್ದ 22 ಬಸ್ ಹಾಗೂ ವಿವಿಧ ಊರುಗಳಲ್ಲಿ ತಂಗಿದ್ದ ಬಸ್‌ಗಳು ಬೆಳಗಿನ ಸಮಯದಲ್ಲಿ ಸಂಚರಿಸಿ ಆಯಾ ಡಿಪೋ ಸೇರಿದ್ದವು. ಇನ್ನುಳಿದಂತೆ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿತ್ತಾದರೂ ಮಧ್ಯಾಹ್ನದ ಬಳಿಕ ಕಡಿಮೆಯಾಯಿತು.

ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಬೆಳಗ್ಗೆ ಸಾರಿಗೆ ಬಸ್‌ಗಳ ಕೊರತೆಯಿಂದಾಗಿ ಹನೂರು, ಕೊಳ್ಳೇಗಾಲ ಹಾಗೂ ಇತರ ಕಡೆಗಳ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ನಿಂತು ತೊಂದರೆ ಅನುಭವಿಸಿದರು. ಬಳಿಕ ಆಗಮಿಸಿದ ಬಸ್‌ನಲ್ಲಿ ಕೆಲವರು ತೆರಳಿದರೆ, ಬಹುತೇಕ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳ ಮೊರೆ ಹೋದರು.

ಕೆಲಸದ ನಿಮಿತ್ತ ಹನೂರಿಗೆ ಆಗಮಿಸಿ ಕೆಲಸ ಮುಗಿದ ಬಳಿಕ ಊರಿಗೆ ತೆರಳುವ ವೇಳೆ ನಿಲ್ದಾಣಕ್ಕೆ ಆಗಮಿಸಿದ ಜನರು ಬಂದ್ ವಿಷಯ ತಿಳಿದರು. ಸರ್ಕಾರಿ ಬಸ್ ಬಾರದಿರುವುದನ್ನು ಮನಗಂಡು ಖಾಸಗಿ ಬಸ್‌ಗಳತ್ತ ಮುಖ ಮಾಡಿದರು. ಆದರೆ ಒಡೆಯರಪಾಳ್ಯ, ಪಿ.ಜಿ ಪಾಳ್ಯ, ಮಾರ್ಟಳ್ಳಿ, ಹೂಗ್ಯಂ ಶಾಗ್ಯ ಹಾಗೂ ಇತರ ಗ್ರಾಮದ ಜನರು ಬಸ್‌ಗಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ತೊಂದರೆ ಅನುಭವಿಸಿದರು. ಕೆಲವರು ಆಟೋಗಳ ಮೂಲಕ ತೆರಳಿದರು. ಇತ್ತ ಶಕ್ತಿ ಯೋಜನೆಯಿಂದ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರು ಬಂದ್ ಎಫೆಕ್ಟ್‌ನಿಂದ ಖಾಸಗಿ ಬಸ್‌ನಲ್ಲಿ ಹಣ ನೀಡಿ ತೆರಳುವಂತಾಯಿತು. ಬಂದ್ ಹಿನ್ನೆಲೆ ಜನರ ಸಂಚಾರ ವಿರಳವಾಗಿತ್ತು. ವ್ಯಾಪಾರ ವಹಿವಾಟು ಕ್ಷೀಣಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಹನೂರು ಹಾಗೂ ಮ.ಬೆಟ್ಟ ಬಸ್ ನಿಲ್ದಾಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಮ.ಬೆಟ್ಟಕ್ಕೆ ಭಕ್ತರ ಸಂಖ್ಯೆ ಕ್ಷೀಣ: ಮ.ಬೆಟ್ಟಕ್ಕೆ ನಿತ್ಯ ವಿವಿಧ ಘಟಕಗಳಿಂದ 126 ಸಾರಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಶಕ್ತಿ ಯೋಜನೆಯ ಪರಿಣಾಮ ಸಾಮಾನ್ಯ ದಿನಗಳಲ್ಲೂ ಸಹ ಮ.ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಆದರೆ ಬಂದ್ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕ್ಷೀಣವಾಗಿತ್ತು. ಆಗಮಿಸಿದ್ದ ಬಹುತೇಕ ಭಕ್ತರು ತಮ್ಮ ಊರುಗಳಿಗೆ ತೆರಳಲು ಖಾಸಗಿ ಬಸ್‌ಗಳನ್ನು ಅವಲಂಬಿಸಿದರು. ನಿತ್ಯ ಭಕ್ತರಿಂದ ಗಿಜಿಗುಡುತ್ತಿದ್ದ ಮ.ಬೆಟ್ಟದ ಬಸ್ ನಿಲ್ದಾಣ ಮಂಗಳವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net