

ಕಿಕ್ಕೇರಿ : ರೈತರಿಗೆ ಹೈನೋದ್ಯಮ ಬದುಕು ಕಟ್ಟಿಕೊಡಲು ಸಹಕಾರಿಯಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಬುಧವಾರ ಏರ್ಪಡಿಸಿದ್ದ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಶುಗಳ ಆರೈಕೆಯಿಂದ ಉತ್ತಮ ಜೀವನ ಸಾಧ್ಯವಿದೆ. ಮಿಶ್ರತಳಿ ಹಸುಗಳು ಹೆಚ್ಚು ಹಾಲು ಕೊಡಲಿದ್ದು, ರೈತರ ಜೇಬಿಗೆ ನಿತ್ಯ ಹಣ ನೀಡಲಿದೆ. ಈ ರಾಸುಗಳು ತುಂಬ ಸೂಕ್ಷ್ಮವಾಗಿದ್ದು ಆರೈಕೆ ಬಲು ಮುಖ್ಯ. ಆಗಿಂದಾಗ್ಗೆ ಆರೋಗ್ಯ ತಪಾಸಣೆ, ಪೌಷ್ಟಿಕಾಂಶ ಆಹಾರ, ಮಿನರಲ್ಸ್, ಮೇವು ನೀಡಿ ಎಂದು ಸಲಹೆ ನೀಡಿದರು.
ಹಸು ಗರ್ಭಾವಸ್ಥೆಯಲ್ಲಿದ್ದಾಗ ಚೆನ್ನಾಗಿ ಪೋಷಣೆ ಮಾಡಬೇಕಿದೆ. ಹಸು ಕರು ಹಾಕಿದ ನಂತರ ಡೇರಿಗಳಿಗೆ ಹಾಲು ಹಾಕದೆ ಮೊದಲು ಕರುಗಳಿಗೆ ಹೆಚ್ಚಿನ ಹಾಲುಣಿಸಬೇಕು. ಇದು ಕರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ. ಸದೃಢವಾಗಿ ಬೆಳೆಯಲಿವೆ. ಉತ್ತಮವಾಗಿ ಬೆಳೆದ ಕರುಗಳು ಹೆಚ್ಚು ಹಾಲು ನೀಡುವುದರ ಜತೆಗೆ ಬಹುತೇಕ ರೋಗಗಳಿಂದ ದೂರವಾಗಿ ರಕ್ಷಣೆ ಪಡೆಯಲಿವೆ. ಅಜಾಗರೂಕತೆ ತೋರಿದರೆ ಹಸು, ಕರುಗಳಿಗೆ ವಿವಿಧ ರೋಗಗಳು ಮಾರಣಾಂತಿಕವಾಗಲಿದೆ ಎಂದರು.
ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ 70 ಕರುಗಳು ಭಾಗವಹಿಸಿದ್ದವು. ಉತ್ತಮ 4 ಕರುಗಳ ಪಾಲಕರಿಗೆ ಹಾಲಿನ ಸಂಗ್ರಹಣೆಯ ಕ್ಯಾನ್‌ಗಳನ್ನು ಬಹುಮಾನವಾಗಿ ನೀಡಲಾಯಿತು. ಭಾಗವಹಿಸಿದ್ದ ಎಲ್ಲ ಕರುಗಳ ಪಾಲಕರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ.ಎಚ್.ಎಸ್. ದೇವರಾಜು, ಆಯ್ಕೆ ಸಮಿತಿ ವೈದ್ಯರಾದ ಡಾ. ಕೃಷ್ಣಮೂರ್ತಿ, ಡಾ. ರವಿಕುಮಾರ್, ಡಾ. ಸಂಜು, ಡಾ. ಬಿಎನ್. ವಿನಯಕುಮಾರ್, ಸುಧಾ, ಡೇರಿ ಅಧ್ಯಕ್ಷ ಪುಟ್ಟೇಗೌಡ, ಗ್ರಾಪಂ. ಸದಸ್ಯರಾದ ಸುಮಿತ್ರಾ ಶಂಭುಲಿಂಗಯ್ಯ, ಕುಮಾರಣ್ಣ, ಶಂಕರೇಗೌಡ, ದೇವೇಗೌಡ, ಶೇಖರ್, ರಾಮೇಗೌಡ, ಸಿಬ್ಬಂದಿ ನಾಗೇಶಕುಮಾರ್, ಸುಕುಮಾರ್, ಕಾಂತರಾಜು, ಚೇತನ್, ಮಂಜು, ಭೈರಾಜು ಮತ್ತಿತರರಿದ್ದರು.