

ಬೆಂಗಳೂರು: ಕರೊನಾ ಲಾಕ್ಡೌನ್ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಮೊದಲ ಹಂತದ ಲಾಕ್ಡೌನ್ ಸಡಿಲಿಕೆ ವೇಳೆ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ. ಬಸ್ ಸಂಚಾರ ಆರಂಬವಾದರೆ ಕರೊನಾ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರಕ್ಕೆ ಅನುಮತಿ ಬೇಡ ಎಂದು ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿತ್ತು. ಇದೀಗ ನಗರದಲ್ಲಿ ಬಿಎಂಟಿಸಿ ಬಸ್ಗಳನ್ನ ರಸ್ತೆಗಿಳಿಸುವಂತೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಒತ್ತಡ ಬಂದಿದೆ. ಇದಕ್ಕೆ ಮಣಿದ ಬಿಬಿಎಂಪಿ ಜೂ.21ರಿಂದ ನಗರದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಆದರೆ ಕೆಲ ಷರತ್ತುಗಳನ್ನೂ ವಿಧಿಸಿದೆ.
ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಬಿಎಂಟಿಸಿ ಎಂಡಿ, ನಗರ ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.