

ಮೈಸೂರು: ಸ್ವಉದ್ಯೋಗಕ್ಕಾಗಿ ಸಾಲ ನೀಡುವಂತೆ ಅರ್ಜಿ ಸಲ್ಲಿಸಿದರೂ ಸತಾಯಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕನ್ನಡದ ಸಿನಿಮಾ "ಆಕ್ಟ್ 1978'' ಮಾದರಿಯಲ್ಲಿ ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿ ಜಯ ಪಡೆದಿದ್ದಾರೆ.
ನೀಲಿ ಲೋಹಿತ್ ನೀಲಿ ಕಲಾ ಕ್ರಿಯೇಷನ್ಸ್ ಸಂಸ್ಥಾಪಕಿ ಜೆ.ಮಂಜುಳಾ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದವರು. ಮಣ್ಣಿನ ಆಭರಣಗಳ ವಿನ್ಯಾಸಕಿ ಹಾಗೂ ಶಿಕ್ಷಕಿಯಾಗಿರುವ ಮಂಜುಳಾ ಅವರು ಸ್ವಂತ ಉದ್ದಿಮೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸುವ ಉದ್ದೇಶದಿಂದ ಬ್ಯಾಂಕೊಂದರಲ್ಲಿ ಸಾಲ ಪಡೆಯಲು ಯತ್ನಿಸಿದರು.
ಆದರೆ, ಅಧಿಕಾರಿಗಳು ಸಾಲ ನೀಡಲು 3 ತಿಂಗಳಿಂದ ಅಲೆಸಿದರು. ಇದನ್ನು ಖಂಡಿಸಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ಕೆಲ ಸಮಯದಲ್ಲೇ ಮಹಿಳೆಗೆ ನ್ಯಾಯ ದೊರಕಿದೆ. ಬ್ಯಾಂಕ್ನ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ.
ಈ ಬಗ್ಗೆ ಖುದ್ದು ಮಂಜುಳಾ ಅವರೇ ಫೇಸ್ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕ್ನ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ, ಕೆಲವೊಂದು ದಾಖಲೆಗಳ ಬದಲಾವಣೆಯೊಂದಿಗೆ ಸಮಸ್ಯೆ ಬಗೆಹರಿಸುವ ಮೂಲಕ ನನಗೆ ನ್ಯಾಯ ಕೊಡಿಸಿದ್ದಾರೆ. ಸಹಕರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ.