

ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ಹಿರೇಯಡಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಕ್ತ ಕಲೆ ಬಿದ್ದಿರುವುದನ್ನು ಶುಕ್ರವಾರ ಬೆಳಗ್ಗೆ ನೋಡಿದ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಹಿರೇಕೆರೂರ ಠಾಣೆಯ ಪಿಎಸ್ಐ ನೀಲಪ್ಪ ನರಲಾರ, ಪ್ರಭಾರಿಬಿಇಒ ಎನ್. ಸುರೇಶಕುಮಾರ ಭೇಟಿ ನೀಡಿ, ಗ್ರಾಮಸ್ಥರು, ಪೊಲೀಸ್ ಸಿಬ್ಬಂದಿಯೊಂದಿಗೆ ಆವರಣದ ಸುತ್ತಲೂ ಪರಿಶೀಲನೆ ನಡೆಸಿದರು. ಪ್ರತಿಕ್ರಿಯಿಸಿದ ಸ್ಥಳದಲ್ಲಿದ್ದ ಗ್ರಾಮಸ್ಥರು ಇದು ಯಾವುದೋ ಪ್ರಾಣಿಯ ರಕ್ತದ ಕಲೆಯಾಗಿದೆ ಎಂದರು. ಕಲೆ ನೋಡಿದಾಗಿನಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಕುರಿತು ಬಿಇಒ ಎನ್. ಸುರೇಶಕುಮಾರ ಮಾತನಾಡಿ, ಈಗಾಗಲೇ ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿಯಿಂದ ಶ್ವಾನದಳ ತರಲು ರ್ಚಚಿಸಲಾಗಿದ್ದು, ತಜ್ಞರನ್ನು ಕರೆಸಿ ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗುವುದು ಎಂದು ಪಿಎಸ್ಐ ತಿಳಿಸಿದ್ದಾರೆ ಎಂದರು. ಸ್ಥಳದಲ್ಲೇ ಪೊಲೀಸರು ಬೀಡು ಬಿಟ್ಟಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು. ನಂತರ ಎಂದಿನಂತೆ ಶಾಲೆಗೆ ಆಗಮಿಸಿದ್ದ ಮಕ್ಕಳಿಗೆ ಧೈರ್ಯ ತುಂಬಿ ತರಗತಿ ಆರಂಭಿಸಿದರು.