

ಬಾಗಲಕೋಟೆ: ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ತನು, ಮನ, ಧನ ವಿನಿಯೋಗ ಮಾಡುತ್ತಾರೆ. ಆದರೂ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲು ಸಾಧ್ಯವಾಗುವುದಿಲ್ಲ. ಇಲ್ಲೊಬ್ಬ ಅಂಧ ವಿದ್ಯಾರ್ಥಿ ಹಲವು ಕೊರತೆಗಳ ನಡುವೆಯೂ ರಾಜ್ಯವೇ ಗಮನ ಸೆಳೆಯುವ ಸಾಧನೆ ಮಾಡಿದ್ದಾನೆ.
ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಕೃಷ್ಣ ಶಿವಾನಂದ ಬನ್ನಿದಿನ್ನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.91.2 ಅಂಕ ಪಡೆದು ಗಮನ ಸೆಳೆದಿದ್ದಾನೆ. ರಾಜ್ಯದ ಅಂಧ ವಿದ್ಯಾರ್ಥಿಗಳಲ್ಲಿ ಕೃಷ್ಣ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಇತರ ಶಾಲೆಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾನೆ. ಅಂಧ ಎನ್ನುವುದನ್ನು ತಲೆಗೆ ಹಚ್ಚಿಕೊಳ್ಳದೆ ಸಂಗೀತ, ಯೋಗಸಾನದಲ್ಲಿಯೂ ಅಪಾರ ಪ್ರತಿಭೆ ಹೊರ ಹಾಕಿದ್ದಾನೆ.
ಕೃಷ್ಣ ಬನ್ನಿದಿನ್ನಿ ಮೂಲತಃ ಮತ್ತಿಕಟ್ಟಿ ಗ್ರಾಮದ ನಿವಾಸಿಯಾದರೂ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯಲ್ಲಿ ಓದಿದ್ದಾನೆ. ಅವರ ಕುಟುಂಬಕ್ಕೆ 3 ಎಕರೆ ಜಮೀನು ಇದೆ. ತಂದೆ ಶಿವಾನಂದ, ತಾಯಿ ನಿಂಗಮ್ಮ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಾರೆ. ಅವರ ಸಹೋದರ ಪೂರ್ಣಾನಂದ ಕೂಡ ಅಂಧನಾಗಿದ್ದು, 2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90.02 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಬಡತನ, ಅಂಧತ್ವ ಸಾಧನೆಯ ಶಿಖರಕ್ಕೆ ಅಡ್ಡಿಯಾಗಿಲ್ಲ. ಬದಲಾಗಿ ಅದನ್ನು ಸವಾಲ್ ಆಗಿ ಸ್ವೀಕರಿಸಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ.
ಬ್ರೈಲ್ ಲಿಪಿ ಮೂಲಕ ಸಾಧನೆ ಹೊಳೆಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ ಅನೇಕ ವರ್ಷಗಳಿಂದ ಅಂಧ ಮಕ್ಕಳಿಗೆ ಶಿಕ್ಷಣ, ವಸತಿ ನೀಡುತ್ತಿದೆ. ಕೃಷ್ಣ ಕೂಡ ಎಲ್ಲ ಮಕ್ಕಳಂತೆ ಬ್ರೈಲ್ ಲಿಪಿ (ಸ್ಪರ್ಶ ಜ್ಞಾನ) ಮೂಲಕ ಓದಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಅಂಧತ್ವ ಜತೆಗೆ ಮೂರ್ಛೆ ರೋಗ ಕೃಷ್ಣನನ್ನು ಕಾಡಿತ್ತು. ಧೃತಿಗೆಡದೆ ಯೋಗಾಸನ ಮಾಡಿ ರೋಗ ಹಿಮ್ಮೆಟ್ಟಿದ್ದಾನೆ.
2024 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೊಳೆಆಲೂರು ಕಲ್ಮೇಶ್ವರ ಹೈಸ್ಕೂಲ್‌ನಲ್ಲಿ ಸಹಾಯಕನ ಮೂಲಕ ಪರೀಕ್ಷೆ ಬರೆದಿದ್ದನು. ಕನ್ನಡ ಭಾಷೆಗೆ 125ಕ್ಕೆ 109, ಇಂಗ್ಲಿಷ್‌ಗೆ 100ಕ್ಕೆ 89, ಹಿಂದಿಗೆ 93, ಅರ್ಥಶಾಸ್ತ್ರ 97, ರಾಜ್ಯಶಾಸ್ತ್ರ 98, ಸಮಾಜ ವಿಜ್ಞಾನ 84 ಸೇರಿ 625 ಕ್ಕೆ 570 ಅಂಕ ಪಡೆದಿದ್ದಾನೆ. *ಮಲ್ಲಕಂಬ, ಸಂಗೀತ ಯೋಗದಲ್ಲಿ ಸಾಧನೆ ಶಿಕ್ಷಣ ಮಾತ್ರವಲ್ಲದೆ ಇತರ ಚಟುವಟಿಕೆಯಲ್ಲಿಯೂ ಕೃಷ್ಣ ಮುಂಚೂಣಿಯಲ್ಲಿದ್ದಾನೆ.
ಗಸಾನದಲ್ಲಿ ಗಂಡ ಬೆರುಂಡಾಸನ, ಪಿರಂಗಿ ಮುಕ್ತಾಸನ, ವೃಶ್ಚಿಕಾಸನ, ಮುಕ್ತ ಹಸ್ತ ವೃಶ್ಚಿಕಾಸನ ಹಾಗೂ ಮಲ್ಲಕಂಬದಲ್ಲಿ ಕ್ರೈಸ್ತಾಸನ, ನಟರಾಜಸಾನ, ಗಾಲಾಸನ ಸೇರಿ ವಿವಿಧ ಆಸನ ಮಾಡುತ್ತಾನೆ. ಅಲ್ಲದೆ ಸುಗಮ ಸಂಗೀತದಲ್ಲಿಯೂ ಎತ್ತಿದ ಕೈ. ಹಾರ್ಮೋನಿಯಂ, ತಬಲಾ ಕಲೆಯೂ ಕರಗತವಾಗಿವೆ. ಚೆನ್ನೈ, ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು 3 ಸಾರಿ ಮೈಸೂರು ದಸರಾದಲ್ಲಿ ಯೋಗ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾನೆ.
ಕೇಂದ್ರ ಸರ್ಕಾರ ನಡೆಸುವ ದಿವ್ಯ ಶಕ್ತಿ ಕಲಾ ಸಂಘದ ಮಲ್ಲಕಂಬ ಪ್ರದರ್ಶನದಲ್ಲಿ ಭಾಗಿಯಾಗಿ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಕೃಷ್ಣ ಬನ್ನಿದಿನ್ನಿ ನಮ್ಮ ಶಾಲೆಯ ವಿದ್ಯಾರ್ಥಿಯಾಗಿದ್ದು, ಅಪಾರ ಜ್ಞಾನವಿದೆ. ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಅಂಧತ್ವ, ಬಡತನ ಆತನಿಗೆ ಅಡ್ಡಿಯಾಗಿಲ್ಲ. ಭವಿಷ್ಯದಲ್ಲಿ ಶಿಕ್ಷಕ, ಪ್ರಾಚಾರ್ಯ ಆಗಬೇಕು ಎನ್ನುವ ಕನಸು ಅವನದು.
ಮಹಾಲಕ್ಷ್ಮಿ ಬಿ.ಚಕ್ಕಡಿ, ಪ್ರಾಚಾರ್ಯ, ಹೊಳೆಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ