

ಬೆಂಗಳೂರು: ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೆ ಯುವತಿಯರು ಮಂಚ ಹತ್ತಬೇಕು. ಯುವಕರಿಗೆ ನೌಕರಿ ಬೇಕು ಅಂದ್ರೆ ಲಂಚ ಕೊಡಬೇಕು ಎಂಬಂತಹ ಕೆಟ್ಟ ಪರಿಸ್ಥಿತಿಯನ್ನು ಕರ್ನಾಟಕದಲ್ಲಿ ಈಗಿನ ರಾಜ್ಯ ಸರ್ಕಾರ(ಬಿಜೆಪಿ) ನಿರ್ಮಿಸಿದೆ. ರಾಜ್ಯದಲ್ಲಿ ಲಂಚ-ಮಂಚದ ಸರ್ಕಾರ ಕೆಲಸ ನಿರ್ವಹಿಸುತ್ತಿದೆ ಎಂದಿದ್ದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಲಂಚ- ಮಂಚದ ಸರ್ಕಾರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ "ತಮ್ಮ ಮನೆಯ ಹೆಂಚು ತೂತು" ಎಂಬುದೇ ಗೊತ್ತಿಲ್ಲ. ಇವರು ಆರೋಪ ಮಾಡಿದ ಬೆನ್ನಲ್ಲೇ ಜಯಮಾಲಾ ಅವರ ಲಂಚದ ಹಗರಣ ಬಯಲಾಗಿದೆ. ಹಾಗಾದರೆ ಲಂಚದ ಸರ್ಕಾರ ಯಾರದ್ದು? ಸಹಾಯ ಮಾಡುವುದಾಗಿ ನಂಬಿಸಿ ಅಸಹಾಯಕ ಹೆಣ್ಣೊಬ್ಬಳ ಮೇಲೆ ಮೇಟಿ ಲೈಂಗಿಕ ದೌರ್ಜನ್ಯ ಎಸಗಿದ್ದು ನಿಮ್ಮ ಕಾಲದಲ್ಲೇ ಅಲ್ಲವೇ? ಯುಪಿಎ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದ ಕಾಂಗ್ರೆಸ್ ನಾಯಕರುಗಳು ಮಹಿಳೆಯರ ಮೇಲೆ ನಡೆಸಿದ " ದಿಗ್ವಿಜಯ" " ಅಭಿಷೇಕ" ಗಳ ಸಿಡಿ ನಿಮ್ಮ ಮಂಚದ ಸರ್ಕಾರದ ಫಲವಲ್ಲವೇ? ಎಂದು ಸರಣಿ 'ಕೂ' ಮಾಡುವ ಮೂಲಕ ಪ್ರಿಯಾಂಕ್ ಖರ್ಗೆಯನ್ನು ಬಿಜೆಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತ ಸಿಡಿಗಳೂ ಇವೆ. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ ಕಾಂಗ್ರೆಸ್ ಗೋಮುಖ ವ್ಯಾಘ್ರಗಳ ಪಟ್ಟಿ ನೀಡಿದರೆ ಸಮರ್ಥನೆ ಮಾಡಿಕೊಳ್ಳುವುದಕ್ಕೂ ನಿಮಗೆ ಕಷ್ಟವಾಗಬಹುದು. ಸಾವಿರಾರು ಮಹಿಳೆಯರು, ಪ್ರತಿಭಾವಂತರು, ವಿದ್ಯಾವಂತರು ಕಷ್ಟಪಟ್ಟು, ಅನೇಕ ಪರೀಕ್ಷೆಗಳನ್ನು ಉತ್ತೀರ್ಣರಾಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ? ಕೂಡಲೇ ಕ್ಷಮೆಯಾಚಿಸಿ ಎಂದು ಪ್ರಿಯಾಂಕ್ ಖರ್ಗೆಯನ್ನು ಬಿಜೆಪಿ ಆಗ್ರಹಿಸಿದೆ. ಬಿಜೆಪಿಯವರಿಗೆ ಉರಿ ಬಿದ್ದಿದೆ: ಬಿಜೆಪಿ ಮಾತಿಗೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ನಾನು 'ಲಂಚ ಮಂಚದ ಸರ್ಕಾರ' ಎಂದಿದ್ದಕ್ಕೆ ಬಿಜೆಪಿಯವರಿಗೆ ಉರಿ ಬಿದ್ದಿದೆ. ಸತ್ಯ ಆ ಮಟ್ಟಿಗೆ ಕಹಿಯಾಗಿರುತ್ತದೆ. ಬಿಜೆಪಿಯಲ್ಲಿ ಲಂಚ, ಮಂಚದ ಪುರಾಣವಿರದಿದ್ದರೆ ಒಬ್ಬ ಕೇಂದ್ರ ಸಚಿವರು, ಇನ್ನೊಬ್ಬ ರಾಜ್ಯ ಸಚಿವರು ರಾಜೀನಾಮೆ ನೀಡಿದ್ದೇಕೆ? ಬಿಜೆಪಿ ಸಂಸದರು, ಮಂತ್ರಿಗಳು, ಶಾಸಕರು ಕೋರ್ಟಿನಲ್ಲಿ ಸಾಲು ಸಾಲು ತಡೆಯಾಜ್ಞೆ ತಂದಿದ್ದೇಕೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.