

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿಯಲ್ಲಿನ ಹಗರಣ ಕಾಂಗ್ರೆಸ್ ಪಕ್ಷದ ಕೂಸು. ಈ ಹಗರಣ ಕಾಂಗ್ರೆಸ್ ಪಕ್ಷದ ಮನೆ ಬಾಗಿಲಿಗೇ ಹೋಗಿ ನಿಲ್ಲುತ್ತೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದರು.
ಪಿಎಸ್ಐ ಹುದ್ದೆ ಹಗರಣ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನ ಸಿಐಡಿ ಬಂಧಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕೊಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿಸಿದ್ದರು. ಅಮೃತ್ ಪೌಲ್ರ ಬಂಧನ ಕೇವಲ ಕಣ್ಣೊರೆಸುವ ತಂತ್ರ. ಈ ಪ್ರಕರಣದಲ್ಲಿ ಸಚಿವರ ಪಾತ್ರ ಇದೆ, ದೊಡ್ಡವರ ಪಾತ್ರ ಇದೆ. ಎಲ್ಲವೂ ಬಹಿರಂಗವಾಗಲಿ. ಈ ಅಕ್ರಮದಲ್ಲಿ ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇದ್ದಾರೆ. ಬಿ.ವೈ.ವಿಜಯೇಂದ್ರ ಕೂಡ ಇದ್ದಾರೆ. ವಿಜಯೇಂದ್ರ ಅವರ ಹೆಸರನ್ನು ಬರೆದುಕೊಳ್ಳಿ. ಇವರ ಬಗ್ಗೆ ಮಾಹಿತಿ ಏನಿದೆ? ಎಂದು ಈಗ ಬಹಿರಂಗ ಪಡಿಸಲ್ಲ. ಎಲ್ಲಿ ಕೊಡಬೇಕೋ ಅಲ್ಲಿಯೇ ಕೊಡುತ್ತೇವೆ ಎಂದಿದ್ದರು.
ಈ ಕುರಿತು ಇಂದು(ಶನಿವಾರ) ಮಾತನಾಡಿದ ವಿಜಯೇಂದ್ರ, ಪಿಎಸ್ಐ ಹಗರಣದಲ್ಲಿ ಯಾವ ಪುಣ್ಯಾತ್ಮ ನನ್ನ ಹೆಸರು ಹೇಳಿದವನು? ಸಿದ್ದರಾಮಯ್ಯಗೆ ನಾನು ಉತ್ತರ ಕೊಡುವುದಿಲ್ಲ, ಕಪೋಲ ಕಲ್ಪಿತ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸುವುದಿಲ್ಲ. ಕೆಲಸಕ್ಕೆ ಬಾರದ್ದರಲ್ಲಿ ನಾನು ಇನ್ವಾಲ್ವ್ ಆಗಿಲ್ಲ. ಅಕಸ್ಮಾತ್ ಅಧಿಕೃತವಾಗಿ ಪಿಎಸ್ಐ ಅಕ್ರಮದಲ್ಲಿ ಅಧಿಕೃತವಾಗಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೇ ನಿಲ್ಲುವುದಿಲ್ಲ ಎಂದು ಸವಾಲು ಹಾಕಿದರು.