

ಬೆಳಗಾವಿ: ತಾಲೂಕಿನ ಪಂತ ಬಾಳೇಕುಂದ್ರಿಯ ಪಂತನಗರ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಸ್ನೇಹಿತರಿಬ್ಬರು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವರಿಬ್ಬರ ಅಂತ್ಯಸಂಸ್ಕಾರ ಸ್ನೇಹಿತರ ದಿನವೇ(ಭಾನುವಾರ) ನೆರವೇರಿದ್ದು, ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ.
ಸುಳೇಭಾವಿ ಗ್ರಾಮದ ಸೋಮನಾಥ ಪ್ರಭು ಖವಾಶಿ (22) ಮತ್ತು ವಿಠ್ಠಲ ಗಣಪತಿ ಡವಳಿ (22) ಮೃತ ದುರ್ದೈವಿಗಳು. ಇವರಿಬ್ಬರೂ ಬೆಳಗಾವಿಯಿಂದ ಸುಳೇಭಾವಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಟಿಪ್ಪರ್ ಕೆಳಗೆ ಸಿಕ್ಕಿ ಬೈಕ್ ನುಜ್ಜುಗುಜ್ಜಾಗಿದೆ. ವಿಠಲ ಡವಳಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಸ್ಥಿತಿಯಲ್ಲಿದ್ದ ಸೋಮನಾಥ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಸಿದರು. ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗುತ್ತಿದ್ದ ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.