ಟೆಕ್ಸ್​ಟೈಲ್ ಪಾರ್ಕ್​ನಿಂದ ಮಹತ್ತರ ಬದಲಾವಣೆ

Munenkoppa
Published on

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಧಾರವಾಡ ಜಿಲ್ಲೆಗೆ ಜವಳಿ ಪಾರ್ಕ್ ಘೊಷಣೆ ಆಗಿದೆ. ರಾಜ್ಯಕ್ಕೆ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಬಂದರೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲಿದೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನೇಕಾರ ನಗರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸ್ಥಾಪನೆಯಾದ ಹುಬ್ಬಳ್ಳಿ ವಿದ್ಯುತ್ ಮಗ್ಗ ಉತ್ಪಾದಕರ ಕಂಪನಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ನೇಕಾರ ಸಮ್ಮಾನ್ ಯೋಜನೆ ಮೂಲಕ ಪ್ರತಿಯೊಬ್ಬ ನೇಕಾರರಿಗೆ 5 ಸಾವಿರ ರೂ. ನೆರವು ನೀಡಲಾಗುತ್ತಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಸಬ್ಸಿಡಿ ದರದಲ್ಲಿ ದಾರವನ್ನು ಒದಗಿಸಲಾಗುತ್ತಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನೇಕಾರರ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ನೀಡಲಾಗಿದೆ ಎಂದರು.

ಜವಳಿ ಇಲಾಖೆಯ ಮಾಹಿತಿಗಳು ನೇಕಾರರಿಗೆ ತಲುಪಬೇಕು. ಉತ್ಪಾದನೆ ಮಾಡಿದ ಸೀರೆಗಳನ್ನು ತ್ವರಿತವಾಗಿ ಮಾರಾಟ ಮಾಡಬೇಕು. ಹುಬ್ಬಳ್ಳಿ ಸೀರೆ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದು ಸಲಹೆ ನೀಡಿದರು.

ದೇವೇಂದ್ರ ಚುಂಚ್ಯಾ ಅವರ ಬಾಲಾಜಿ ಟೆಕ್ಸ್​ಟೈಲ್ಸ್ ಹಾಗೂ ಹನುಮಂತ ಪೂಜಾರಿ ಅವರ ಮಾರುತಿ ಟೆಕ್ಸ್​ಟೈಲ್ಸ್ ಕೈಮಗ್ಗ ಕಾರ್ಖಾನೆಗಳಿಗೆ ಭೇಟಿ ನೀಡಿ, ಸೀರೆ ನೇಯ್ಗೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net