

ಮಂತ್ರಾಲಯ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಭಾರತ್ ಜೋಡೋ ಯಾತ್ರೆ ಕರ್ನಾಟಕ ರಾಜ್ಯದಲ್ಲಿ ಎರಡನೇ ಚರಣ ಆರಂಭಿಸಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಕೇಂದ್ರೀಕರಿಸಿ ಶುಕ್ರವಾರ ಮಂತ್ರಾಲಯದ ಮೂಲಕ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿದೆ.
ಚಾಮರಾಜನಗರದಿಂದ ಆರಂಭವಾಗಿ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮೂಲಕ ಆಂಧ್ರಕ್ಕೆ ಸಾಗಿದ್ದ ಭಾರತ್ ಜೋಡೋ ಯಾತ್ರೆ, ಪುನಃ ರಾಜ್ಯದಲ್ಲಿ ಮೂರು ದಿನ ಸಾಗಲಿದೆ.
ಗುರುವಾರ ರಾತ್ರಿ ಮಂತ್ರಾಲಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ, ಬೃಂದಾವನ ದರ್ಶನ ಮಾಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ಶುಕ್ರವಾರ ಬೆಳಗ್ಗ ಪೂರ್ವ ನಿಗದಿತ ಸಮಯಕ್ಕಿಂತ ಇಪ್ಪತ್ತು ನಿಮಿಷ ಮೊದಲೇ ಮಂತ್ರಾಲಯದಿಂದ ಯಾತ್ರೆ ಹೊರಟಿತು. ಬೆಳಗ್ಗೆ 8.30ರ ಸುಮಾರಿಗೆ ರಾಜ್ಯದ ಗಡಿ ತಲುಪಿತು.
ಆಂಧ್ರದ ನಾಯಕರು ರಾಹುಲ್ ಗಾಂಧಿಯನ್ನು ಬೀಳ್ಕೊಟ್ಟರೆ, ಕರ್ನಾಟಕ ನಾಯಕರ ದಂಡು ಬರಮಾಡಿಕೊಂಡಿತು. ಜಾನಪದ ಕಲಾತಂಡಗಳು ಯಾತ್ರೆಯ ಕಳೆ ಹೆಚ್ಚಿಸಿದ್ದು, ಶಕ್ತಿ ಪ್ರದರ್ಶನವೇ ನಡೆದಿದೆ.