

ಮೈಸೂರು: ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದೊಳಗಿದ್ದ ಭದ್ರಕಾಳಿ ವಿಗ್ರಹ ನಾಪತ್ತೆಯಾಗಿದ್ದು, ಭಕ್ತರ ಆಕ್ರೋಶ ಭುಗಿಲೆದ್ದಿದೆ.
ಶಿವನ ಅವತಾರ ಮೂರ್ತಿಗಳಲ್ಲಿ ಒಂದಾದ ವೀರಭದ್ರೇಶ್ವರ ಮೂರ್ತಿ ಶ್ರೀಕಂಠೇಶ್ವರ ದೇವಾಲಯದ ಒಳ ಆವರಣದ ಬಲಭಾಗದಲ್ಲಿದೆ. ವೀರಭದ್ರ ಮೂರ್ತಿಯ ಜತೆ ಬಲಭಾಗದಲ್ಲಿ ದಕ್ಷಬ್ರಹ್ಮ ಹಾಗೂ ಎಡಭಾಗದಲ್ಲಿ ಭದ್ರಕಾಳಿ ಮೂರ್ತಿ ಇತ್ತು. ಇದೀಗ ಭದ್ರಕಾಳಿ ವಿಗ್ರಹ ಕಾಣೆಯಾಗಿದ್ದು, ಅನುಮಾನಕ್ಕೆ ಎಡೆಮಾಡಿದೆ.
ಪ್ರತಿದಿನ ಪೂಜೆ ಪುರಸ್ಕಾರಗಳನ್ನು ಸಲ್ಲಿಸಲಾಗುತ್ತಿದ್ದ ಭಧ್ರಕಾಳಿ ವಿಗ್ರಹ ಧಿಢೀರ್ ಸ್ಥಳಾಂತರ ಮಾಡಿದ ಉದ್ದೇಶವಾದ್ರೂ ಏನು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ. ಸ್ಥಳಾಂತರಗೊಂಡ ಸ್ಥಳದ ಬಳಿ ಹೋಮ ನಡೆಸಿದ ಕುರುಹುಗಳಿವೆ. ವಿಗ್ರಹಗಳಿಗೆ ಪೂಜೆ ಮಾಡುವ ಕಾರ್ಯ ಹೊರತು ಪಡಿಸಿದ್ರೆ ಸ್ಥಳಾಂತರ ಮಾಡಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನು ಅನುಸರಿಸಬೇಕಿದೆ. ಆದ್ರೆ ಸಿಬ್ಬಂದಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಸ್ಥಳಾಂತರ ಮಾಡಿದ್ದಾರೆ ಎನ್ನಲಾಗಿದೆ.
ವಿಗ್ರಹ ಭಿನ್ನವಾಗಿರಬಹುದೆಂದು ಶಂಕಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಧಿಢೀರ್ ಸ್ಥಳಾಂತರ ಮಾಡಿದ್ದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ. ವಿಗ್ರಹಗಳ ಸರಿಯಾದ ನಿರ್ವಹಣೆ ಇಲ್ಲದೆ ಹಾಗೂ ಅಜಾಗರೂಕತೆಯಿಂದ ಮೂರ್ತಿಯು ಮುರಿದು ಬಿದ್ದಿರಬಹುದೆಂದು ಶಂಕಿಸಲಾಗಿದ್ದು, ಈ ಸಂಗತಿ ಭಕ್ತರಿಗೆ ತಿಳಿಯಬಾರದೆಂದು ಗೌಪ್ಯತೆ ಕಾಪಾಡಲಾಗುತ್ತಿದೆ ಎಂಬ ಅನುಮಾನವಿದೆ.
ದೇವಾಲಯಗಳ ನಿರ್ಮಾಣ ಕಾಲದಲ್ಲೇ ಆಲಯದ ಎಡಭಾಗದಲ್ಲಿ 64 ನಯನಾರ್ ವಿಗ್ರಹಗಳು, ಬಲಭಾಗದಲ್ಲಿ 18 ಶಿವನ ಅವತಾರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ವಿಗ್ರಹಕ್ಕೆ ಹಾಕಿದ್ದ ಅಷ್ಟಬಂಧನ ಶಕ್ತಿ ಕಳೆದುಕೊಂಡು ಮೂರ್ತಿಗಳು ಅಲುಗಾಡುವ ಸ್ಥಿತಿ ತಲುಪಿವೆ. ಅದರ ದುರಸ್ತಿ ಕಾರ್ಯ ನಡೆದಿಲ್ಲ. ಈ ಕುರಿತು ಈ ಹಿಂದೆಯೇ ಅಷ್ಟ ಮಂಗಲ ಪ್ರಶ್ನೆ ಹಾಕಿದ್ದ ಸಂದರ್ಭದಲ್ಲಿ ಅಷ್ಟಬಂಧನ ಹಾಕಿ ಕಲಾಪೂರ್ಣ ಮಾಡಬೇಕೆಂದು ಪ್ರಸ್ತವಾನೆ ಸಲ್ಲಿಸಲಾಗಿತ್ತು. ಆದರೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರಲಿಲ್ಲ. ದೇವಾಲಯಕ್ಕೆ ಹುಂಡಿ ಸಂಗ್ರಹದಲ್ಲಿ ತಿಂಗಳಿಗೆ 1 ಕೋಟಿಗೂ ಅಧಿಕ ಆದಾಯವಿದೆ. ವಾಹನ ನಿಲುಗಡೆ ಟೆಂಡರ್, ಚಪ್ಪಲಿ ಟೆಂಡರ್ ,ಶೌಚಗೃಹದ ಟೆಂಡರ್, ಲಾಡು ,ಕಲ್ಲು ಸಕ್ಕರೆ, ವಿಶೇಷ ದರ್ಶನದ ಟಿಕೆಟ್... ಹೀಗೆ ತಿಂಗಳಿಗೆ ಕೋಟಿ ಕೋಟಿ ಆದಾಯ ಇದೆ. ನೂರಾರು ಕೋಟಿ ಹಣ ದೇವಾಲಯದ ಖಾತೆಯಲ್ಲಿದೆ. ಆದಾಯದಲ್ಲಿ ಸಮೃದ್ಧವಾಗಿದ್ದರೂ ಮೂರ್ತಿಗಳ ಸಂರಕ್ಷಣೆಗೆ ಹಣ ವ್ಯಯ ಮಾಡಲು ಆಸಕ್ತಿ ತೋರದಿರುವುದು ನಿರ್ಲಕ್ಷ್ಯತೆಗೆ ಸಾಕ್ಷಿ.
ಭಾರತೀಯ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದಲ್ಲಿ ಸುಮಾರು ಮೂರು ಅಡಿಗಳಷ್ಟು ಎತ್ತರದ ಭದ್ರಕಾಳಿಯ ಮೂರ್ತಿ ಏನಾಯ್ತು? ಎಂಬ ವಿಚಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಉತ್ತರಿಸಬೇಕಿದೆ. ಈ ಹಿಂದೆ ಚಂಡಿಕೇಶ್ವರನ ವಿಗ್ರಹ ಭಗ್ನವಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿತ್ತು. ಇದೀಗ ಭದ್ರಕಾಳಿ ವಿಗ್ರಹ ಸ್ಥಳಾಂತರ ಮತ್ತೆ ಇದೇ ರೀತಿಯ ವಿವಾದಕ್ಕೆ ಕಾರಣವಾಗುತ್ತಿದೆ.