ವ್ಯಕ್ತಿತ್ವ ವಿಕಸನವಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಪ್ರೊ.ಎಸ್. ಶಿವರಾಜಪ್ಪ ಅಭಿಮತ

A better society can be built if personality is developed
Published on

ಮೈಸೂರು: ಸಾಕಷ್ಟು ಜನರಲ್ಲಿ ವ್ಯಕ್ತಿತ್ವ ವಿಕಸವಾಗದ ಹಿನ್ನೆಲೆಯಲ್ಲಿ ದೇಶದಲ್ಲಿ ಅತ್ಯಾಚಾರ, ಅನಾಚಾರದಂತಹ ಘಟನೆಗಳು ನಡೆಯುತ್ತಿದ್ದು, ಪ್ರತಿಯೊಬ್ಬರು ವ್ಯಕ್ತಿತ್ವ ವಿಕಸನದ ಕಡೆಗೆ ಗಮನ ಹರಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಭಿಪ್ರಾಯಪಟ್ಟರು.

ನಗರದ ಶ್ರೀ ನಟರಾಜ ಪ್ರಥಮ ದರ್ಜೆ ಮಹಿಳಾ ವಸತಿ ಕಾಲೇಜು ವತಿಯಿಂದ ನಟರಾಜ ಸಭಾಭವನದಲ್ಲಿ ಬುಧವಾರ ‘ವ್ಯಕ್ತಿತ್ವ ವಿಕಸ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ವ್ಯಕ್ತಿ ವ್ಯಕ್ತಿಯಾಗಿ ಮಾತ್ರ ಉಳಿಯಬಾರದು, ಉತ್ತಮ ವ್ಯಕ್ತಿತ್ವವನ್ನು ಸಹ ಬೆಳೆಸಿಕೊಳ್ಳಬೇಕು. ನಾಡು, ನುಡಿಯ ಬಗ್ಗೆ ಅಭಿಮಾನ ಇಟ್ಟುಕೊಂಡು ಸುಂದರವಾದ ನಡೆ, ನುಡಿ ರೂಢಿಸಿಕೊಂಡರೆ ವ್ಯಕ್ತಿತ್ವ ವಿಕಸವಾಗುತ್ತದೆ ಎಂದರು.

ಗಾಂಧೀಜಿ ಮಹಾತ್ಮ ಆಗಿದ್ದು ಅವರ ವ್ಯಕ್ತಿತ್ವದ ಕಾರಣಕ್ಕೆ. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಿದರೆ ನೀವು ಸಹ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ. ಇದಕ್ಕೆ ನಮ್ಮ ನಡೆ, ನುಡಿಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ನಾವು ಉತ್ತಮ ನಡೆ, ನುಡಿಯೊಂದಿಗೆ ಉತ್ತಮವಾಗಿ ಬದುಕಿದರೆ ದೇಶವೂ ಉತ್ತಮವಾಗಿರುತ್ತದೆ ಎಂದರು.

ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಎಸ್. ನಿರಂಜನ ಮಾತನಾಡಿ, ನಮ್ಮ ವ್ಯಕ್ತಿತ್ವ ವಿಕಸನವಾದರೆ ದೇಶ ಸಹ ಅಭಿವೃದ್ಧಿ ಹೊಂದುತ್ತದೆ. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಉತ್ತಮ ಮಾನವ ಸಂಪೂಲ್ಮವನ್ನು ವಿಶ್ವಕ್ಕೆ ನೀಡಬೇಕು ಎಂದರು.

ಉತ್ತಮ ಮಾನವ ಸಂಪನ್ಮೂಲ ಇದ್ದರೆ ಯಾವುದೇ ದೇಶ ಅಭಿವೃದ್ಧಿ ಹೊಂದುತ್ತದೆ. ಇದಕ್ಕೆ ಅಮೆರಿಕ ಉದಾಹರಣೆಯಾಗಿದೆ. ನಮ್ಮಲ್ಲೂ ಉತ್ತಮ ಮಾನವ ಸಂಪನ್ಮೂಲವನ್ನು ತಯಾರಿಸುವ ಕಾರ್ಯ ಆಗಬೇಕು. ನಮ್ಮ ವಿದ್ಯಾಸಂಸ್ಥೆಗಳಿಂದ ಉತ್ತಮ ಮಾನವ ಸಂಪನ್ಮೂಲ ಹೊರ ಹೊಮ್ಮಬೇಕಾಗಿದೆ ಎಂದರು.

ನಟರಾಜ ಕಾಲೇಜಿನ ಪ್ರಾಂಶುಪಾಲೆ ಎಂ.ಶಾರದಾ, ಪ್ಲೇಸ್‌ಮೆಂಟ್ ಸೆಲ್‌ನ ಸಂಯೋಜಕಿ ಎನ್. ಹೇಮಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net