ಉತ್ತಮ ವಿದ್ಯಾಭ್ಯಾಸದಿಂದ ಉತ್ತಮ ಭವಿಷ್ಯ ಸಾಧ್ಯ

09 HANUR 2
Published on

ಹನೂರು : ಶಾಲಾ ಹಂತದಲ್ಲೇ ಓದಿನ ಕಡೆ ಆಸಕ್ತಿ ವಹಿಸುವುದರಿಂದ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದರ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಳೇ ವಿದ್ಯಾರ್ಥಿಗಳೇ ಸಾಕ್ಷಿ ಎಂದು ಕೊಳ್ಳೇಗಾಲ ಬಿಇಒ ಮಂಜುಳಾ ತಿಳಿಸಿದರು.

ತಾಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ 2009-10ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿರುತ್ತಾರೆ. ಶಿಕ್ಷಕರ ಬೋಧನೆ ಯಶಸ್ಸು ಕಾಣಬೇಕಾದರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಧನಾತ್ಕಕತೆಯನ್ನು ಹೊಂದಬೇಕು. ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳುವುದರತ್ತ ಚಿಂತಿಸಬೇಕು. ಹೀಗಾದಾಗ ಶಿಕ್ಷಣ ನೀಡಿದ್ದು, ಸಾರ್ಥಕತೆ ಎನಿಸುತ್ತದೆ ಎಂದರು.

ಇದರಲ್ಲಿ ಹಳೆಯ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಒತ್ತು ನೀಡಿ ಬಹುತೇಕರು ಉದ್ಯೋಗವನ್ನು ಪಡೆದುಕೊಳ್ಳುವುದರ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿರುವುದು ಸಂತಸದ ವಿಷಯ. ಇದರಿಂದ ಶಿಕ್ಷಕರ ಗೌರವ ಹೆಚ್ಚಿದಂತಾಗಿದೆ. ಈ ಶಾಲೆಯಲ್ಲಿ ಸುಮಾರು 26 ವರ್ಷಗಳ ಸೇವೆ ಸಲ್ಲಿಸಿದ್ದು, ಉತ್ತಮ ಅನುಭವ ದೊರಕಿದೆ. ಇದೀಗ ಬಿಇಒ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿ ಮಾನವೀಯತೆಯನ್ನು ಬೆಳೆಸಿಕೊಂಡಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.

ಶಿಕ್ಷಕರಿಗೆ ಗುರುವಂದನೆ:

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮಂಜುನಾಥ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೊಳ್ಳೇಗಾಲದ ಎಬಿನೇಜರ್, ಕಾಮಗೆರೆ ನಿವೃತ್ತ ಮುಖ್ಯ ಶಿಕ್ಷಕಿ ಚಿನ್ನಮ್ಮ, ಚಿಕ್ಕಮಗಳೂರಿನ ನಿವೃತ್ತ ಶಿಕ್ಷಕ ಎ.ಎನ್.ಪರಮೇಶ್ವರಪ್ಪ, ರಾಮಾಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಾಂತಿ, ರಾಮಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಾಂತಕುಮಾರಿ, ಹೊಸ ಮಾಲಂಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಸ್.ದೇವರಾಜು, ಕೊಳ್ಳೇಗಾಲ ಎಸ್‌ವಿಕೆ ಕಾಲೇಜಿನ ಉಪನ್ಯಾಸಕಿ ನಿರ್ಮಲಾ, ದೇವಲಪುರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ಎಸ್ ಹರ್ಷ, ಕೊಳ್ಳೇಗಾಲ ತಾಲೂಕು ಅಲ್ಪ ಸಂಖ್ಯಾತರ ವಿಸ್ತರಣಾಧಿಕಾರಿ ಸಿದ್ದರಾಜು, ಪೊಲೀಸ್ ಇಲಾಖೆಯ ಕಾಮಗೆರೆ ಶಂಕರ್ ಹಾಗೂ ಅತಿಥಿ ಶಿಕ್ಷಕ ಶಿವನಾಗು ಅವರನ್ನು ಸನ್ಮಾನಿಸಲಾಯಿತ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಹೇಶ್, ಶಿಕ್ಷಕರಾದ ಪ್ರಭುಸ್ವಾಮಿ, ಸೂರ್ಯಕಾಂತ್, ಪುಟ್ಟಸ್ವಾಮಿ, ಸತೀಶ್, ಮಹದೇವಸ್ವಾಮಿ, ಶಂಭಯ್ಯ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net